Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಪ್ರಪಂಚ ಕಿತ್ಕೊಂಡ್ ಬೆಳೀತಿದೆ ಈಗೆಲ್ಲಿದೆ ಜಾತಿ ಅನ್ನೋರಿಗೆ ಒಂದಷ್ಟು ಉದಾಹರಣೆಗಳನ್ನ ಒಮ್ಮೆ ಕಣ್ಣಾಡಿಸಿ...ನಿಮ್ಮ ಅನುಭವಕ್ಕೆ ಬಂದದ್ದನ್ನ ಕಮೆಂಟಿಸಿ...


ಪ್ರಪಂಚ ಕಿತ್ಕೊಂಡ್ ಬೆಳೀತಿದೆ ಈಗೆಲ್ಲಿದೆ ಜಾತಿ ಅನ್ನೋರಿಗೆ ಒಂದಷ್ಟು ಉದಾಹರಣೆಗಳನ್ನ ಒಮ್ಮೆ ಕಣ್ಣಾಡಿಸಿ...
ನಿಮ್ಮ ಅನುಭವಕ್ಕೆ ಬಂದದ್ದನ್ನ ಕಮೆಂಟಿಸಿ...

#ಕಹಿನೆನಪುಗಳು #CasteSystemInIndia 

◾ನನಗೆ ಆರೇಳು ವರ್ಷಗಳಿರಬೇಕು, ಬೆಂಗಳೂರಿನ ಬಾಡಿಗೆ ಮನೆಯಲ್ಲಿದ್ದಾಗ ಅಪ್ಪ-ಅಮ್ಮ ನನಗೆ "ಅಕ್ಕಪಕ್ಕದ ಮನೆಯವರು ಯಾರಾದ್ರು ನಿಮ್ ಜಾತಿ ಯಾವ್ದು ಅಂತ ಕೇಳಿದ್ರೆ ಗೊತ್ತಿಲ್ಲ ಅಂತ ಹೇಳ್ಬೇಕು, ಆಯ್ತಾ?" ಅಂತ ಹೇಳಿಕೊಡ್ತಿದ್ದ ನೆನಪು.

◾ಅದೇ ಏರಿಯಾದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೆ, Scholarship ಬಂದಾಗ ಅಮ್ಮ ನನಗೆ " ಶಾಲೇಲಿ scholarship ದುಡ್ಡು ಕೊಟ್ರು ಅಂತ ಹೇಳ್ಬೇಡ ಯಾರಿಗು" ಅಂತ ಹೇಳಿದ್ ನೆನಪು.

◾ಶಾಲೇಲಿ ಪರಿಶಿಷ್ಟ ಜಾತಿ ಮಕ್ಕಳಿಗೆ ಉಚಿತ ಅಕ್ಕಿ ಸಕ್ಕರೆ ಬೇಳೆ ಕೊಡ್ತಿದ್ದಾರೆ ಅಮ್ಮ ಅಂದಾಗ, ಅಮ್ಮ "ತಗೊಂಡು ಬರುವಾಗ ರೋಡಿನಿಂದ ಬರ್ಬೇಡ, ಬೇರೆ ಗಲ್ಲಿ ಇದಿಯಲ್ಲ ಆ ದಾರಿಯಿಂದ ಬಾ. ಬರುವಾಗ ಅಕ್ಕಪಕ್ಕದ ಮನೆಯವರ ಕಣ್ಣಿಗೆ ಬೀಳಬೇಡ. ಏನೂಂತ ಕೇಳುದ್ರೆ ಚಿಕ್ಕಪ್ಪ ಕೊಟ್ರು(ಸಂಬಂಧಿಕರ ಮನೆ ಶಾಲೆ ಬಳಿ ಇತ್ತು) ಅಂತ ಹೇಳು" ಅಂದಿದ್ದ ನೆನಪು.

◾ ಆ ಏರಿಯಾ ಬಿಟ್ಟು ಬೇರೆ ಏರಿಯಾದಲ್ಲಿ ಬಾಡಿಗೆ ಮನೆಗೆ ಬಂದರೆ, ಅಲ್ಲೂ ಸಹ ಮತ್ತದೇ ಕಥೆ. ಸುಳ್ಳು ಜಾತಿ ಹೇಳಿ ಮನೆ ಬಾಡಿಗೆಗೆ ಪಡೆದಿದ್ದು. ಅಪ್ಪ ಅಮ್ಮನಿಂದ ಅದೇ ಎಚ್ಚರಿಕೆ "ಜಾತಿ ಕೇಳಿದ್ರೆ SC ಅಂತ ಹೇಳ್ಬೇಡ ಅಂತ".

◾ Census ಗೆ ಬಂದಾಗ ಅಮ್ಮ ಜಾತಿ ಹೇಳೋಕೆ ಯಾರಾದ್ರು ನೆರೆಹೊರೆಯವ್ರು ಕೇಳಿಸಿಕೊಳ್ತಾರಾ ಅಂತ ನೋಡ್ತಿದ್ದ ನೆನಪು. 

◾ ಶಾಲೆಗೆ ಬಿಡೋಕೆ, ಕರ್ಕೊಂಡು ಹೋಗೋಕೆ ಅಂತ ಅಮ್ಮ ಮತ್ತು ಪಕ್ಕದ ಮನೆ ಹೆಂಗಸು ಇಬ್ಬರೂ ಒಟ್ಟಿಗೆ ಬರ್ತಿದ್ದೋರು, ಆ ಹೆಂಗಸಿನ ಮಗಳು ನನಗೆ scholarship ಬಂದಿದೆ ಅಂತ ಹೇಳಿದ ನಾಳೆಯಿಂದ ಅಮ್ಮನ ಜೊತೆ ಬರೋದೆ ಬಿಟ್ಟರು. ಶಾಲೇಲಿ ಆ ಹುಡುಗಿ " ಹೇ ನಿನ್ ಜೊತೆ ಸೇರ್ಬೆಡ, lunch box share ಮಾಡ್ಬೇಡ ಅಂತ ನಮ್ ಅಮ್ಮ ಹೇಳಿದ್ರು" ಅಂತ ಹೇಳಿದ್ ನೆನಪು.

◾ ಆ ಏರಿಯಾ ಬಿಟ್ಟು ಈಗಿರುವ ಏರಿಯಾಗೆ ಬಂದಾಗ ಓನರ್ ಸಹ ಪರಿಶಿಷ್ಟ ಜಾತಿಯವರು ಎಂದು ತಿಳಿದು ನಮ್ಮ ತಂದೆ ತಾಯಿ ನಿಟ್ಟುಸಿರು ಬಿಟ್ಟದ್ದು.

◾ ಏಳನೇ ತರಗತಿಯಲ್ಲಿದ್ದೆ. ಚೆನ್ನಾಗಿ ಓದುತ್ತಿದ್ದೆವೆಂದು ನನ್ನನ್ನು ಹಾಗು ನನ್ನ ಸ್ನೇಹಿತೆಯನ್ನೂ ಕ್ಲಾಸ್ ಮಾನಿಟರ್ ಮಾಡಿದ್ರು. ಅಲ್ಲಿಗೆ ಹೊಸದಾಗಿ ಬಂದಿದ್ದ ಲೇಡಿ ಟೀಚರ್ ನಮ್ಮಿಬ್ಬರನ್ನೂ ಬಹಳ ಆತ್ಮೀಯವಾಗಿ ಕಾಣುತ್ತಿದ್ದರು. ಅವರ ಮೊಮ್ಮಗನನ್ನ ಶಾಲೆಗೆ ಆಗಾಗ ಕರೆದುಕೊಂಡು ಬರುತ್ತಿದ್ದರು. ಪುಸ್ತಕಗಳ correction ಇದ್ದಾಗ ಮಗು, ಪುಸ್ತಕಗಳು ಎರಡನ್ನೂ ಹಿಡಿದುಕೊಳ್ಳೋಕೆ ಕಷ್ಟ ಅಂತ್ಹೇಳಿ ನನ್ನ ಹಾಗು ನನ್ನ ಸ್ನೇಹಿತೆಯನ್ನ ಪುಸ್ತಕಗಳನ್ನ ಹಿಡಿದುಕೊಂಡು ಅವರ ಮನೆವರೆಗು ಕರೆದುಕೊಂಡು ಹೋಗ್ತಿದ್ರು. ಮನೆ ಒಳಗೆ ಕರೆದು ಹಣ್ಣುಗಳು, ಚಾಕಲೇಟ್ಗಳನ್ನು ಕೊಟ್ಟು ಕಳುಹಿಸ್ತಿದ್ರು. ಒಂದಿನ Scholarship announce ಆಗಿದೆ ಪ.ಜಾ. ಮಕ್ಕಳು ಎದ್ದು ನಿಂತ್ಕೊಳಿ ಅಂದಾಗ ನಾನೂ ನಿಂತಿದ್ದನ್ನ ನೋಡಿ ಅವರ ಮುಖದಲ್ಲಿ ಮೂಡಿದ ಆಶ್ಚರ್ಯ ಇನ್ನೂ ನನ್ನ ಕಣ್ಣಿನಲ್ಲಿ ಕಟ್ಟಿದ ಹಾಗಿದೆ. ಆಗ ಅವರು " ಶುಭಾ, ನೀನೂ SC ನಾ?" ಅಂತ ಕೇಳಿದ್ದು, ಮಿಕ್ಕವರನ್ನ ತೋರಿಸಿ " ಇವ್ರೆಲ್ಲಾರ್ ಮುಖಗಳನ್ನ ನೋಡಿದ್ರೆ SC ಅಂತ ಗೊತ್ತಾಗುತ್ತೆ, ಆದ್ರೆ ನಿನ್ನ ನೋಡಿ ಹಾಗನ್ಸಿಲ್ಲ ಯಾವತ್ತೂ ನಂಗೆ" ಅಂತ ಹೇಳಿದ್ದರು. ಅವರು ಹೀಗೆ ಹೇಳೋಕೆ ಕಾರಣ, ಅವರ ಮೈಬಣ್ಣ. ಅದಾದ ಮೇಲೆ ಅವರು ಯಾವಾತ್ತು ನನ್ನ ಅವರ ಮನೆಗೆ ಕರೆದುಕೊಂಡು ಹೋಗಲೇ ಇಲ್ಲ.(ನನಗೂ ಹೋಗುವ ಮನಸ್ಸು ಬರಲಿಲ್ಲ) ಅವರು ಕೊಂಕಣಿ ಬ್ರಾಹ್ಮಣರು ಅಂತ ನಂತರ ತಿಳಿಯಿತು. ಜಾಸ್ತಿ ದಿನ ಅವರು ನಮ್ಮ ಶಾಲೆಯಲ್ಲಿ ಇರಲೂ ಇಲ್ಲ. ಅವರು Retired ಆದರು, ನನಗೆ ಒಂದು ರೀತಿಯ ನೆಮ್ಮದಿ ಅನಿಸಿತು. ಹೋದ್ರಲ್ಲ ಸದ್ಯ ಅಂತ ನಿಟ್ಟುಸಿರು ಬಿಟ್ಟದ್ದೂ ನಿಜ. 😁

◾ ಸ್ನೇಹಿತೆಯರ ಮನೆಗೆ ಹೋದಾಗ ಆ ಮನೆಯವರು "ನಿಮ್ ಜಾತಿ ಯಾವ್ದು" ಅಂತ ಕೇಳಿದಾಗ ಆಗ್ತಿದ್ದ anxiety ಮರೆಯೋಕಾಗಲ್ಲ. ಅಕಸ್ಮಾತ್ ಅವರಿಗೂ ನನ್ನ ಗೊಂದಲ ಗೊತ್ತಾಗಿ
"ನಾವೂ ದಲಿತರೆ, ಪರವಾಗಿಲ್ಲ ಹೇಳು" ಅಂದಾಗ ಆಗ್ತಿದ್ದ ಸಮಾಧಾನ ಮಾತಲ್ಲಿ ಹೇಳೋಕಾಗಲ್ಲ. 

ಅಪ್ಪ ಅಮ್ಮ ಸುಳ್ಳು ಜಾತಿ ಹೇಳೋಕೆ ಕಾರಣ ಬಾಡಿಗೆ ಮನೆಗಳು ಬರಿ ಮೇಲ್ಜಾತಿಯವರಿಗೆ ಮಾತ್ರ ಸೀಮಿತವಾಗಿದ್ದವು. 
ಅಕ್ಕ ಪಕ್ಕದ ಮನೆಯವರಿಗೆ ಜಾತಿ ಗೊತ್ತಾದ್ರೆ, ಕಿರಿಕ್ ಗಳು, ಕೀಳಾಗಿ ಕಾಣೋದು ಎಲ್ಲಾ ಆಗ್ತಿತ್ತು. ಇದನ್ನ ಎದುರಿಸೋ ಶಕ್ತಿ ಕೂಲಿ ಮಾಡ್ಕೊಂಡಿದ್ದ ನಮ್ಮ ತಂದೆಗೆ ಇರಲಿಲ್ಲ. ಬದುಕು ಕಟ್ಟಿಕೊಳ್ಳೋಕೆ ಅಂತ ಬೆಂಗಳೂರಿಗೆ ಬಂದದ್ದು ಬಿಟ್ರೆ ಬೇರೆ ಯಾವುದೇ silly ಜಗಳಗಳು ಹೆತ್ತವರಿಗೆ ಬೇಕಾಗಿರಲಿಲ್ಲ.

ಇನ್ನೂ ಇಂತಹ ನೆನಪುಗಳು ಸಾಕಾಷ್ಟಿವೆ. ಯಾರದ್ರೂ "ಜಾತಿಗೀತಿ ಎಲ್ಲ ಈಗಿನ ಕಾಲದಲ್ಲಿ ಇಲ್ಲ, ನಮ್ಮ ತಾತನ ಕಾಲಕ್ಕೆ ಮುಗಿತು", "Reservation ಇವಾಗ್ಲೂ ಯಾಕೆ ಬೇಕು", "ಕಾಲ ಬದಲಾಗಿದೆ" etc., ಅಂತೆಲ್ಲ ಬಿಟ್ಟಿ ಭಾಷಣ ಕೊಟ್ಟಾಗ ಇದನ್ನೆಲ್ಲಾ ಹೇಳಿ " ನಿಮಗೂ ಈ ಅನುಭವ ಆಗಿದ್ಯಾ?" ಅಂತ ಕೇಳ್ಬೇಕು ಅಂತ ಅಂದ್ಕೊಂಡು ಕೊನೆಗೆ ಪ್ರಯೋಜನ ಏನೂ ಇಲ್ಲ, ತಮ್ಮ ತಮ್ಮ ಜಾತಿಗಳನ್ನ ಸರ್ ನೇಮ್ ಮಾಡ್ಕೊಂಡು, ಅದಿಲ್ಲ ಅಂದ್ರೆ ತಮ್ಮ identity ಏನೂ ಅಂತಾನೇ ತಿಳಿದೇ ಇರೋ ಸಂಕುಚಿತ ಮನಸ್ಥಿತಿ ಇರೋರ ಬಳಿ ಏನೇ ಹೇಳಿದ್ರು ನಾಯಿ ಬಾಲಕ್ಕೆ ದೆಬ್ಬೆ ಕಟ್ಟಿದ ಹಾಗೆ ಅಂತ ಸುಮ್ಮನಾದ ಸಮಯಗಳಿಗೆ ಲೆಕ್ಕವೇ ಇಲ್ಲ.

Comments