Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಅಸಂಖ್ಯ ಜನರಿಗೆ ದೃಷ್ಟಿಕೊಟ್ಟು ಕತ್ತಲು ನಿವಾರಿಸಿದ ಡಾ.ಶೆಟ್ಟಿ, ತಾವೇ ಕತ್ತಲಲೋಕಕ್ಕೆ ಹೇಳದೇ ಕೇಳದೇ ಹೊರಟುಹೋಗಿದ್ದಾರೆ.


ಪ್ರಸಿದ್ಧ ನೇತ್ರ ತಜ್ಞ ಡಾ.ಕೆ.ಭುಜಂಗ ಶೆಟ್ಟಿ ನಿಧನರಾದ ಸುದ್ದಿ ತಿಳಿದು ಆಘಾತವಾಯಿತು. ಎರಡು ದಿನಗಳ ಹಿಂದಷ್ಟೇ ಅವರು ಫೋನ್ ಮಾಡಿದ್ದರು. ಇತ್ತೀಚೆಗೆ ನಾನು ಡಾ.ಶೆಟ್ಟಿ ಬರೆದ Diabetic No More (ಡಯಾಬಿಟಿಸ್ ಗೆ ಮೊದಲ ಡಾಕ್ಟರ್ ನೀವೇ!) ಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದೆ. ಈ ಪುಸ್ತಕವನ್ನು ನೀವೇ ಅನುವಾದಿಸಬೇಕು ಎಂದು ವರಾತ ಮಾಡಿ ಬರೆಯಿಸಿದ್ದರು. ಮಾರ್ಚ್ ನಲ್ಲಿ ನಮ್ಮ ಫೋಟೋಗ್ರಾಫರ್ ಸುಧಾಕರ್ ಅವರನ್ನು ಡಾ.ಶೆಟ್ಟಿಯವರ ಮನೆಗೆ ಕಳಿಸಿ, ಪುಸ್ತಕದ ಮುಖಪುಟಕ್ಕೆ ಅವರ ಚಿತ್ರ ಪ್ರಕಟಿಸಲೆಂದು ಫೋಟೋಶೂಟ್ ಸಹ ಮಾಡಿಸಿದ್ದೆ.  

ಮೊನ್ನೆ ಆ ಕೃತಿಯ ಬಿಡುಗಡೆಗಾಗಿ ನಾವಿಬ್ಬರೂ ಚರ್ಚಿಸಿದ್ದೆವು. ಜೂನ್ ಎರಡನೇ ವಾರ ಬಿಡುಗಡೆ ಮಾಡುವುದೆಂದು ತೀರ್ಮಾನಿಸಿದ್ದೆವು. ಆ ಪುಸ್ತಕ ಏಪ್ರಿಲ್ ನಲ್ಲಿ ಬಿಡುಗಡೆ ಆಗಬೇಕಿತ್ತು. ಮಧ್ಯೆ ಚುನಾವಣೆ ಬಂದಿದ್ದರಿಂದ ಅದು ಮುಗಿದ ನಂತರ ದೊಡ್ಡ ಸಮಾರಂಭ ಮಾಡಿ ಬಿಡುಗಡೆ ಮಾಡೋಣ ಎಂದು ನಿರ್ಧರಿಸಿದ್ದೆವು. ಪ್ರದೀಪ್ ಈಶ್ವರ್ ಅವರು ಆಯ್ಕೆಯಾಗಿದ್ದು ಅವರಿಗೆ ಅತೀವ ಸಂತಸ ತಂದಿತ್ತು. ಫಲಿತಾಂಶ ಬಂದ ದಿನವೂ ಫೋನ್ ಮಾಡಿದ್ದರು. ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ತಾನು ಮಾಡುವುದಾಗಿ ಪ್ರದೀಪ್ ಈಶ್ವರ್ ತಿಳಿಸಿದ್ದಾರೆಂದು ಡಾ.ಶೆಟ್ಟಿ ಹೇಳಿದ್ದರು. 

ಡಾ.ಭುಜಂಗ ಶೆಟ್ಟಿಯವರು ವಿಶ್ವವಾಣಿ ಕ್ಲಬ್ ಹೌಸ್ ಕಾಯಂ ಕೇಳುಗರಾಗಿದ್ದರು. ನಿತ್ಯವೂ ಸಾಯಂಕಾಲ ಏಳಕ್ಕೆ ಹಾಜರ್! ಎರಡು ಸಲ ಉಪನ್ಯಾಸಕರಾಗಿಯೂ ಮಾತಾಡಿದ್ದರು. 

ಇತ್ತೀಚೆಗೆ ಅವರು ತುಮಕೂರಿನಲ್ಲಿ ಸ್ಥಾಪಿಸಿದ ನಾರಾಯಣ ನೇತ್ರಾಲಯ ಉಚಿತ ಸೇವಾ ಆಸ್ಪತ್ರೆ ಆರಂಭಿಕ ಕಾರ್ಯಕ್ರಮದಲ್ಲಿ ಅವರ ಕೋರಿಕೆ ಮೇರೆಗೆ ನಾನು ಪಾಲ್ಗೊಂಡಿದ್ದೆ. ಭೇಟಿಯಾದಾಗಲೆಲ್ಲ ಆರೋಗ್ಯದ ಬಗ್ಗೆ ವಿಚಾರಿಸದೇ ಇರುತ್ತಿರಲಿಲ್ಲ. ದೇಹ ತೂಕ ಕಡಿಮೆ ಮಾಡಿಕೊಳ್ಳುವಂತೆ ಹೇಳುತ್ತಿದ್ದರು. ಆಗಾಗ ಫೋನ್ ಮಾಡಿ, ಏನನ್ನು ಸೇವಿಸಬೇಕು ಎಂದು ಹೇಳುತ್ತಿದ್ದರು. ಕಳೆದ ಹದಿನೈದು ವರ್ಷಗಳಿಂದ ಅವರೊಂದಿಗೆ ಉತ್ತಮ ಒಡನಾಟ, ಸಂಬಂಧದಿಂದ ನಾನು ಅವರಲ್ಲಿ ಒಬ್ಬ ಅಪರೂಪದ ಸ್ನೇಹಿತ, ಹಿತೈಷಿ ಹಾಗೂ ಮಾರ್ಗದರ್ಶಿಯನ್ನು ಕಂಡಿದ್ದೆ. 

ನಿಜಕ್ಕೂ ಅವರ ನಿಧನ ಸುದ್ದಿಯನ್ನು ನಂಬಲಾಗುತ್ತಿಲ್ಲ. ಅವರ ಪುಸ್ತಕವನ್ನು ಬಿಡುಗಡೆ ಮಾಡುವ ಹೊಣೆಯನ್ನು ತಮ್ಮ ಅನುಪಸ್ಥಿತಿಯಲ್ಲಿ ಈ ರೀತಿ ಈಗ ನನ್ನ ಮೇಲೆ ಹೊರಿಸುತ್ತಾರೆಂದು ಕನಸು-ಮನಸಿನಲ್ಲಿಯೂ ಯೋಚಿಸಿರಲಿಲ್ಲ. ಅವರ ಆಶಯದಂತೆ ಆ ಪುಸ್ತಕವನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತೇನೆ. ಅಸಂಖ್ಯ ಜನರಿಗೆ ದೃಷ್ಟಿಕೊಟ್ಟು ಕತ್ತಲು ನಿವಾರಿಸಿದ ಡಾ.ಶೆಟ್ಟಿ, ತಾವೇ ಕತ್ತಲಲೋಕಕ್ಕೆ ಹೇಳದೇ ಕೇಳದೇ ಹೊರಟುಹೋಗಿದ್ದಾರೆ. ಲಕ್ಷಾಂತರ ಜನರಿಗೆ ಕಣ್ಣುಕೊಟ್ಟು ಕಣ್ಮಣಿಯಾಗಿದ್ದ, ಒಬ್ಬ ಅಪರೂಪದ, ಅಸಾಮಾನ್ಯ ವ್ಯಕ್ತಿಯನ್ನು ಕಳೆದುಕೊಂಡ ನೋವು ನನ್ನನ್ನು ಶಾಶ್ವತ ಬಾಧಿಸಲಿದೆ. ಓಂ ಶಾಂತಿ!

Comments