Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಸಜ್ಜನ ರಾಜಕಾರಣಿ ಕೆ.ಜಿ.ಒಡೆಯರ್:


ಸಜ್ಜನ ರಾಜಕಾರಣಿ ಕೆ.ಜಿ.ಒಡೆಯರ್:

ಶಿವಮೊಗ್ಗ ಜಿಲ್ಲೆಯಲ್ಲಿ ಏನಿದೆ, ಏನಿಲ್ಲ? ದೇಶಕ್ಕೆ ಅನೇಕ ಕೊಡುಗೆಯನ್ನಿತ್ತ ಇದು ಮಲೆನಾಡಿನ ಕೃಷಿಕರಿಂದಲೇ ತುಂಬಿದ ಸಮೃದ್ಧ ಜಿಲ್ಲೆ, ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಜಾನಪದ ತಂಡ ಇವೆಲ್ಲದುವುದರಿಂದ ತುಂಬಿ ಬಳುಕುತ್ತಿರುವ ರಾಜ್ಯಕ್ಕೆ ಮಾದರಿಯಾದ ಜಿಲ್ಲೆ ಎಂದು ಹೇಳಬಹುದು.

ಮನುಷ್ಯನ ವ್ಯಕ್ತಿತ್ವವನ್ನು ಅವನ ನಡವಳಿಕೆಯಿಂದ ಅವನ ನಡೆ, ನುಡಿ, ಜನರೊಡನೆ ಬೆರೆತು ಬಂದ ವಾತಾವರಣ, ಪ್ರತಿಭಾವಂತರು ಬೀರಿದ ಪ್ರಭಾವ, ನಿಸ್ವಾರ್ಥ ಜೀವನ, ಇತರರೊಡನೆ ಕಟ್ಟಿಕೊಂಡ ಸ್ನೇಹಸಂಪರ್ಕ. ಇದು ಇತರರಿಗೂ ಆದರ್ಶವಾಗಬಲ್ಲದು.

ಮೇಲೆ ಹೇಳಿದ ಮಾತುಗಳು ಶಿವಮೊಗ್ಗ ಜಿಲ್ಲೆಯಲ್ಲಿ ನಾನು ಕಂಡ ವ್ಯಕ್ತಿಗಳಲ್ಲಿ ಕೆ.ಜಿ.ಒಡೆಯರ್ ಅವರು, ಎಸ್.ವಿ.ಕೃಷ್ಣಮೂರ್ತಿ, ಹಾಗೂ ಎ.ಆರ್, ಬದರಿನಾರಾಯಣರವರಲ್ಲಿ ಕಾಣುತ್ತಿದ್ದೆ. ಈ ಮೂರು ಜನರ ಸಂಪರ್ಕ ಮತ್ತು ಆಶೀರ್ವಾದ ನನ್ನ ಬದುಕನ್ನು ಬೆಳಗಿಸಿದೆ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಕೆ.ಜಿ ಒಡೆಯರ್ ಅವರದು ಸಾಗರ ತಾಲ್ಲೂಕಿನ ಪುಟ್ಟ ಹಳ್ಳಿ ಕಾಗೋಡು. ಅಣ್ಣ ಶಿವಲಿಂಗಪ್ಪ ಗೌಡರು, ತಮ್ಮ ಗುರುವೇ ಗೌಡರು, ತುಂಬು ಸಂಸಾರ, ಅಡಿಕೆ, ಭತ್ತ, ಕಬ್ಬು ಬೆಳೆಯುವ ಕೃಷಿಕರು. ಈ ಮೂರು ಜನರು ಸ್ನೇಹಪರರು, ತಾವು ಸ್ವತಃ ಸಾಗುವಳಿ ಮಾಡಲು ಎಷ್ಟು ಸಾಧ್ಯವೋ ಅಷ್ಟನ್ನು ಇಟ್ಟುಕೊಂಡು, ತಲೆತಲಾಂತರದಿಂದ ಬಂದ ಜಮೀನನ್ನು ರೈತರಿಗೆ ಗೇಣಿ ಕೊಡುತ್ತಿದ್ದರು, ಸಾಕಷ್ಟು ಜಮೀನಿನ ಭೂ ಮಾಲೀಕರು ಆಗಿದ್ದರು.

ಅಂದಿನ ಮೈಸೂರು ರಾಜ್ಯದಲ್ಲಿ ಭೂ ಸುಧಾರಣಾ ಕಾನೂನನ್ನು ಮುಂಬೈ ರಾಜ್ಯದಲ್ಲಿ ತರುವಂತೆ ನಮ್ಮ ರಾಜ್ಯದಲ್ಲೂ ತರಬೇಕೆಂದು ಸರ್ಕಾರ ಪ್ರಸ್ತಾವನೆ ಮಾಡಿದ ಸಂದರ್ಭದಲ್ಲಿ ಅದನ್ನೇ ಉಪಯೋಗಿಸಿಕೊಂಡು ಉಳುವವನೇ ಭೂ ಮಾಲೀಕ ಎಂಬ ಘೋಷಣೆಯೊಡನೆ ರೈತಸಂಘ ಹುಟ್ಟಿಕೊಂಡು ಭೂ ಚಳುವಳಿಯನ್ನು ಪ್ರಾರಂಭಮಾಡಿದರು.

ಕೆ.ಜಿ. ಒಡೆಯರ್, ಎಸ್.ವಿ. ಕೃಷ್ಣಮೂರ್ತಿ ಎಂಬ ಘೋಷಣೆಯೊಡನೆ ರೈತ ಸಂಘಗಳು ಈ ಚಳುವಳಿಯನ್ನು ಪ್ರಾರಂಭಮಾಡಿದರು. ಮೈಸೂರು ರಾಜ್ಯ ಸಾಗರ ತಾಲೂಕಿನ ಕಾಗೋಡು ಗ್ರಾಮದಲ್ಲಿ ಕೆ.ಜಿ, ಒಡೆಯರ್ ಕುಟುಂಬದ ಜಮೀನಿನ ಮೇಲೆ ಸತ್ಯಾಗ್ರಹ ಪ್ರಾರಂಭವಾಗಿ ರಾಷ್ಟ್ರ ನಾಯಕರಾದ ಜಯಪ್ರಕಾಶ ನಾರಾಯಣ, ರಮಾನಂದ ಮಿತ್ರ, ಡಾ. ರಾಮಮನೋಹರ ಲೋಹಿಯ ಮುಂತಾದವರು ರೈತ ಚಳವಳಿಯಲ್ಲಿ ಭಾಗವಹಿಸಿ, ಸತ್ಯಾಗ್ರಹಕ್ಕೊಂದು ರಾಷ್ಟ್ರೀಯ ಮಹತ್ವವನ್ನು ತಂದುಕೊಟ್ಟು 'ಕಾಗೋಡು ಸತ್ಯಾಗ್ರಹ' ಎಂಬ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದರು. ಈ ಸಂದರ್ಭದಲ್ಲಿ ಒಡೆಯರ್‌ರವರು ತಾಳಿದ ನಿಲುವು ಆದರ್ಶ  ಅನುಕರಣೀಯ. ಗೇಣಿ ರೈತರನ್ನು ಹಾಗೂ ಅವರ ನಾಯಕರನ್ನ ಕರೆದು ಸಂಧಾನದ ಮಾತುಕತೆಯಿಂದ ಗೇಣಿ ರೈತರಿಗೆ ಅವರವರು ಮಾಡಿಕೊಂಡ ಭೂಮಿಯನ್ನು ಅವರಿಗೇ ಬಿಟ್ಟುಕೊಟ್ಟು ಇಡೀ ರಾಜ್ಯಕ್ಕೆ ಮೇಲ್ಪಂಕ್ತಿಯಾಗಿ ಧೀರರಾಗಿ ನಿಂತಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿತು.

ಇದೇ ಸಂದರ್ಭದಲ್ಲಿ ಲೋಕಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಶಿವಮೊಗ್ಗ ಕ್ಷೇತ್ರದಿಂದ ಕೆ.ಜಿ, ಒಡೆಯರ್‌ಗೆ ನಿಲ್ಲುವಂತೆ ಅನಾಯಾಸವಾಗಿ ಕಾಂಗ್ರೆಸ್ ಟಿಕೆಟು ದೊರೆಯಿತು. ಆಗಿನ್ನೂ ಕಾಗೋಡು ಚಳುವಳಿಯ ಕಾವು ಶಮನವಾಗಿರಲಿಲ್ಲ. ಬಹಳಷ್ಟು ಜನ ಆ ಸಲ ಕಾಂಗ್ರೆಸ್ ಗೆಲ್ಲುವುದು ಕಷ್ಟ ಎಂದೇ ಭಾವಿಸಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ರೈತರ ಮತವೇ ಹೆಚ್ಚಾಗಿರುವುದರಿಂದ, ಕೆ.ಜಿ. ಒಡೆಯರ್ ಭೂಮಿಯ ಮೇಲೆ ಸತ್ಯಾಗ್ರಹವಿರುವುದರಿಂದ, ರೈತರೆಲ್ಲರೂ ಒಡೆಯರವರ ವಿರೋಧವಾಗಿ ಮತ ಚಲಾಯಿಸುತ್ತಾರೆ ಎಂದು ಭಾವಿಸಿದ್ದರು. ಈ ರೀತಿ ತಿಳಿದವರು ಕೆ.ಜಿ. ಒಡೆಯರ್ ರೈತರಿಗೆ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟು ಇಡೀ ರಾಜ್ಯಕ್ಕೆ ಮಾದರಿಯಾಗಿರುವುದು ನೆನಪಿಗೆ ಬರಲಿಲ್ಲ, ಹಾಗಂತ ಚುನಾವಣೆಯು ಸಪ್ಪೆಯಾಗಿರಲಿಲ್ಲ, ಕಾವು ತಾರಕಕ್ಕೆ ಏರಿತ್ತು, ಫಲಿತಾಂಶ ಹೊರಬಿದ್ದಾಗ, ಕೆ.ಜಿ ಒಡೆಯರ್‌ರವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಇದು ಕಾಂಗ್ರೆಸ್‌ಗೆ ಮಾತ್ರವಲ್ಲ ವಿರೋಧ ಪಕ್ಷಗಳಿಗೂ ಅಚ್ಚರಿಯ ಸಂಗತಿಯಾಗಿತ್ತು.

ಕಾಗೋಡು ಚಳುವಳಿ ಪ್ರಾರಂಭವಾಗುವುದಕ್ಕಿಂತ ಮುಂಚೆ ಕೆ.ಜಿ.ಒಡೆಯರ್‌ರವರು ಕೆಲವು ವರ್ಷ ಜಿಲ್ಲಾ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಈ ಪಕ್ಷವನ್ನು ಸಂಘಟಿಸುವುದರಲ್ಲಿ ತೊಡಗಿಸಿಕೊಂಡಿದ್ದರು. ಅವರು ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದರು. ಗಾಂಧೀಜಿಯವರು ಕರೆ ನೀಡಿದ ಅರಣ್ಯ ಸತ್ಯಾಗ್ರಹ, ಧ್ವಜ ಸತ್ಯಾಗ್ರಹದಲ್ಲಿ ಭಾಗಿಯಾಗಿ ಸೆರೆಮನೆ ವಾಸವನ್ನು ಅನುಭವಿಸಿ ರಾಷ್ಟ್ರಪ್ರೇಮವನ್ನು ಅದ್ಭುತವಾಗಿ ವ್ಯಕ್ತಗೊಳಿಸಿದ್ದರು. ಲೋಕಸಭಾ ಸದಸ್ಯರಾಗಿ ದೆಹಲಿಗೆ ಹೊರಟಾಗ, ಸಾಗರದ ರೈಲ್ವೆ ನಿಲ್ದಾಣದಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಬೀಳ್ಕೊಟ್ಟಾಗ ಎಲ್ಲರ ಹೃದಯ ಭಾರವಾಗಿತ್ತು. ಅದು ಈಗಲೂ ನನ್ನ ಕಣ್ಣ ಮುಂದೆ ಹಾದು ಹೋಗುತ್ತಿರುವ ನೆನಪು. ದೆಹಲಿ ತಲುಪಿದ ನಂತರ ಸಾಗರದ ನಾಲ್ಕಾರು ಜನರಿಗೆ ಪತ್ರ ಬರೆದಿದ್ದರು. ಅದರಲ್ಲಿ ನಾನೂ ಒಬ್ಬನಾಗಿದ್ದೆ. ಸಾಗರದ ಜನ ಎಂತಹ ಸುಸಂಸ್ಕೃತರು ಎಂಬುದಕ್ಕೆ ಒಬ್ಬ ಲೋಕಸಭಾ ಸದಸ್ಯನಿಗೆ ದೆಹಲಿಗೆ ಪ್ರಥಮ ಬಾರಿಗೆ ಸಾಗುವಾಗ ಬೀಳ್ಕೊಟ್ಟಿದ್ದು, ನನ್ನ ಜೀವಮಾನದಲ್ಲಿ ಮರೆಯಲಾಗದ ನೆನಪು. ಅವರು ನಮಗೆ ಬರೆದ ಪತ್ರದಲ್ಲಿ 'ನಿಮ್ಮೆಲ್ಲರ ಪ್ರೀತಿಗೆ ನಾನು ಕೃತಜ್ಞ ಎಂದು ಬರೆಯಲಾಗಿತ್ತು. ಕೆ.ಜಿ. ಒಡೆಯರ್‌ರವರ ಆ ಪತ್ರ ಬರೆದ ಸಾಲುಗಳು ಸ್ವಲ್ಪವೂ ಅಂಕು ಡೊಂಕಾಗಿರುತ್ತಿರಲಿಲ್ಲ. ಅಕ್ಷರಗಳಂತೂ ಬಹಳ ಸುಂದರ ಮತ್ತು ಆತ್ಮೀಯತೆಯಿಂದ ಕೂಡಿದ್ದವು.

ಎರಡನೇ ಬಾರಿಯೂ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಅವರಿಗೆ ಅನುಮತಿ ನೀಡಿತ್ತು. ಆಗಲೂ ಸಹ ಅವರು ಅಧಿಕ ಮತದಿಂದ ಆಯ್ಕೆಯಾದರು. ಅಂದು ಭಾರತ ಸರ್ಕಾರದ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್ ನೆಹರೂರವರು ಚೀನಾ ದೇಶಕ್ಕೆ ಒಂದು ಸಾಂಸ್ಕೃತಿಕ ನಿಯೋಗವನ್ನು ಕಳಿಸಲು ತೀರ್ಮಾನಿಸಿತು. ಅದರಲ್ಲಿ ಹದಿನೈದು ಜನ ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರನ್ನೊಳಗೊಂಡ ನಿಯೋಗದಲ್ಲಿ ಕೆ.ಜಿ. ಒಡೆಯರ್‌ರವರ ಹೆಸರಿರುವುದನ್ನು ನೋಡಿ ನಮಗೆಲ್ಲಾ ಬಹಳ ಸಂತೋಷವಾಗಿತ್ತು. ಆಗ ನಮ್ಮ ಸರ್ಕಾರ ಇತರ ರಾಷ್ಟ್ರಗಳಿಗೆ ನಿಯೋಗ ಕಳಿಸುವುದು ಅಪರೂಪವಾಗಿತ್ತು. ಚೀನಾಕ್ಕೆ ಹೊರಟು ನಿಂತ ನಿಯೋಗಕ್ಕೆ ನೆಹ್ರರವರೇ ಬಂದು ಬೀಳ್ಕೊಟ್ಟರು. ಆಗ ಕೆ.ಜಿ.ಒಡೆಯರ್‌ರವರ ಫೋಟೊ 'ಇಂಡಿಯನ್ ಎಕ್ಸೆಸ್', 'ಟೈಮ್ಸ್ ಆಫ್ ಇಂಡಿಯಾ' ಮುಂತಾದ ಪತ್ರಿಕೆಗಳ ಮುಖ ಪುಟದಲ್ಲಿ ಪತ್ರಿಕೆಯ ತಲೆಬರಹದ ಕೆಳಗೆ ದೊಡ್ಡದಾಗಿ ಪ್ರಕಟವಾಗಿದ್ದು, ಸಾಗರದ ಎಲ್ಲರ ಬಾಯಲ್ಲೂ ಇದೊಂದು ಸಂತೋಷದ ಸುದ್ದಿಯಾಗಿ ಕುಣಿದಾಡಿತು. ಚೀನಾದಿಂದ ಬಂದ ನಂತರ ಕೆ.ಜಿ. ಒಡೆಯರ್‌ರವರ ಮನೆಗೆ ನಾನು ಹೋದೆ. 'ನಾನೇ ಹೇಳಿ ಕಳಿಸಬೇಕೆಂದಿದ್ದೆ' ಎನ್ನುತ್ತ ಅವರು ಸಂತೋಷದಿಂದ ಬಂದು ನನ್ನನ್ನು ಸ್ವಾಗತಿಸಿದರು. ತಮ್ಮ ಪ್ರವಾಸದ ಅನುಭವ ಹಾಗೂ ನಡೆದ ಘಟನೆಗಳನ್ನು ಬಹಳ ಸ್ವಾರಸ್ಯವಾಗಿ ಹೇಳಿ, ನಿಮಗಾಗಿ ಚೀನಾದಿಂದ ಪೆನ್ನು ತಂದಿರುವುದಾಗಿ ಹೇಳಿ ಒಂದು ಒಳ್ಳೆಯ ಪೆನ್ನನ್ನು ಹಾಗೂ ಚೀನಾದ ಟೀ ಬಗ್ಗೆ ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಅಲ್ಲಿಂದ ತಂದ ಒಂದು ಟೇ ಸಾಕೆಟ್ಟನ್ನು ಕೊಟ್ಟರು.

ಒಂದು ವಾರದ ನಂತರ ಹೆಚ್.ಎಲ್, ವೀರಭದ್ರಪ್ಪನವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಯಕರ್ತರ ಸಭೆ ಕರೆದು ಒಡೆಯರ್‌ರವರಿಂದ ಚೀನಾ ಪ್ರವಾಸ ಕುರಿತು ಭಾಷಣ ಏರ್ಪಡಿಸಿದ್ದೆವು. ಕೆ.ಜಿಒಡೆಯರ್‌ರಲ್ಲಿ ಜನರನ್ನ ಸದಾ ಪ್ರೀತಿಸುವ ಸ್ವಭಾವ, ಪರಿಪಕ್ವ ಜೀವನ, ಹದವರಿತ ಮಾತನಾಡುವುದು ಮುಂತಾದ ಆದರ್ಶ ಗುಣಗಳನ್ನು ಕಾಣುತ್ತಿದ್ದೆವು. ಅವರು ಆಜಾನುಬಾಹು ಹಾಗೂ ಯಾರಿಗೂ ನೋವನ್ನುಂಟು ಮಾಡುವಸ್ವಭಾವದವರಲ್ಲ. ತಾನೊಬ್ಬ ಎಂ.ಎ, ಎಂಬ ಅಹಂಭಾವ ಯಾವತ್ತೂ ಆವರನ್ನು ಕಾಡಲಿಲ್ಲ. ಸಜ್ಜನ ರಾಜಕಾರಣಿಯಾಗಿ ಎಂದೂ ಕೂಡ ತಮ್ಮ ಜೀವನದ ಸ್ವಚ್ಛತೆಯನ್ನು ಹಾಳುಮಾಡಿಕೊಂಡವರಲ್ಲ. ಯಾವಾಗಲೂ ಅವರ ತಕ್ಕಡಿ ನ್ಯಾಯದ ಕಡೆಗೆ ತೂಗುತ್ತಿತ್ತು.

ಹದಿನೈದು-ಇಪ್ಪತ್ತು ದಿನಕ್ಕೊಮ್ಮೆ ನಾನು ಸಂಜೆ ಸಮಯ ಬಿಡುವಾದಾಗಲೆಲ್ಲಾ ಕೆ.ಜಿ. ಒಡೆಯರ್ ಮನೆಗೆ ಹೋಗುತ್ತಿದ್ದೆ. ಒಡೆಯರ್ ಪತ್ನಿ ಶ್ರೀಮತಿ ಕಮಲಮ್ಮ ಒಡೆಯರ್ ಸಹ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸೆರೆಮನೆಯನ್ನು ಕಂಡವರು. ಶ್ರೀಮತಿ ಕಮಲಮ್ಮ ಒಳ್ಳೆಯ ಸಾದ್ವಿ ಮಹಿಳೆ. ನಾನು ಹೋದಾಗಲೆಲ್ಲಾ ನಮಗಿಬ್ಬರಿಗೂ ಸೊಗಸಾದ ಟೀ ತಂದು ಕೊಡುತ್ತಿದ್ದರು. ನಮ್ಮ ಹಾಗೂ ನಮ್ಮ ಮನೆಯವರೆಲ್ಲರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ನಾನೂ ಮತ್ತು ಒಡೆಯರ್ ಆಗಾಗ ಇಬ್ಬರೂ ಸೇರಿ ಸಂಜೆ ರೈಲು ಹೋದ ನಂತರ, ರೈಲ್ವೆ ನಿಲ್ದಾಣದ ಕಡೆಗೆ ವಾಕಿಂಗ್ ಹೋಗುವ ರೂಢಿ. ಅಲ್ಲಿ ಕಲ್ಲು ಬೆಂಚಿನ ಮೇಲೆ ಕುಳಿತು ಶೇಂಗಾ ತಿಂದು ಒಂದು ಘಂಟೆಗಳ ಕಾಲ ಮಾತನಾಡುತ್ತಾ ಕುಳಿತುಕೊಳ್ಳುವುದು ರೂಢಿ. ಒಂದು ದಿನ ಹೀಗೆಯೇ ಕುಳಿತಾಗ, “ಸಾಗರಕ್ಕೆ ಅಗತ್ಯವಾಗಿ ಮಾಡಬೇಕಾದ ಕೆಲಸವೆಂದರೆ ಒಂದು ಕಾಲೇಜು ನಿರ್ಮಾಣ, ಈ ಕುರಿತು ಸಾಗರ ನಾಗರೀಕರ ಸಭೆಯನ್ನು ಗಾಂಧಿ ಮಂದಿರದಲ್ಲಿ ಕರೆಯಿರಿ, ಏನು ಅಭಿಪ್ರಾಯ ಬರುತ್ತದೆ ತಿಳಿಯೋಣ, ಸಭೆಯನ್ನು ನೀವು ಕರೆಯಿರಿ"ಎಂದರು. ಅದಕ್ಕೂ ಮೊದಲು ನಾನೇ ಯೋಚನೆ ಮಾಡಿ ಮಣಿಪಾಲದ ಟಿ.ಎಂ.ಎ.ಪೈ ಯವರಿಗೆ, ಒಂದು ಪತ್ರ ಬರೆದು,

“ನೀವು ಏನಾದರೂ ಸಾಗರದಲ್ಲಿ ಕಾಲೇಜನ್ನು ಮಾಡಲು ಸಹಕರಿಸಲು ಸಾಧ್ಯವೇ? ಸಾಧ್ಯವಾದರೆ ನಿಮ್ಮ ನಿಯಮಾವಳಿಗಳು ಏನು?” ಎಂದು ಬರದೆ. ಅದಕ್ಕೆ ಅವರು ಸುಲಭವಾದ ಸೂಚನೆ ನೀಡಿದರು.

“ನೀವು ಹತ್ತು ಎಕರೆ ಭೂಮಿ, ಐದು ಲಕ್ಷ ರೂಪಾಯಿ ಸಂಗ್ರಹ ಮಾಡಿದರೆ ನಾವು ಸಾಗರದಲ್ಲಿ ಒಂದು ಕಾಲೇಜನ್ನು ತೆರೆಯಲು ಸಿದ್ದ. ಒಂಬತ್ತು ಜನರ ಸಮಿತಿ ರಚಿಸಿ, ಅದರಲ್ಲಿ ಏಳು ಜನ ನಿಮ್ಮಲ್ಲಿಯವರು ಹಾಗೂ ಎರಡು ಜನ ಅಕಾಡೆಮಿಯಿಂದ” ಎಂದು ಉತ್ತರ ಬರೆದರು. ಆ ನಿಯಮಕ್ಕೆ ನಾವು ಒಪ್ಪಿಕೊಂಡಿದ್ದರೆ ಇಂದು ನಮ್ಮ ಕಾಲೇಜು ಅದ್ಭುತವಾಗಿ ಬೆಳೆಯುತ್ತಿತ್ತೋ ಎನೋ?

ಅಂದು ಸಭೆಯ ಅಧ್ಯಕ್ಷತೆಯನ್ನು ಕೆ.ಜಿ. ಒಡೆಯರ್‌ರವರೇ ವಹಿಸಿದ್ದರು. ಆ ಸಭೆಯಲ್ಲಿ ಟಿ.ಎಂ.ಎ.ಪೈರವರ ಪತ್ರವನ್ನು ಸಭೆಯ ಮುಂದಿಟ್ಟೆ, ಮೂರು ಘಂಟೆಗಳ ಕಾಲ ಚರ್ಚೆ ನಡೆದು ಕೊನೆಯಲ್ಲಿ ಸ್ವತಂತ್ರವಾಗಿ ಕಾಲೇಜನ್ನು ಕಟ್ಟೋಣ ಎಂಬ ತೀರ್ಮಾನಕ್ಕೆ ಬರಲಾಯಿತು. ನಂತರ ಮತ್ತೊಂದು ಸಭೆಯಲ್ಲಿ ಆ ಸಂಘಕ್ಕೆ “ಸಾಗರ ಪ್ರಾಂತ್ಯ ವಿದ್ಯಾವರ್ಧಕ ಸಂಘ” ಎಂದು ಹೆಸರಿಡಬೇಕೆಂದೂ ಹಾಗೂ ಅದರ ಅಧ್ಯಕ್ಷರನ್ನಾಗಿ ಶ್ರೀ ಕೆ.ಜಿ. ಒಡೆಯರ್‌ರವರನ್ನು ಆರಿಸಬೇಕೆಂದೂ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಒಡೆಯರವರ ಮಾರ್ಗದರ್ಶನ ಹಾಗೂ ಜನರೊಡನೆ ಅವರು ನಡೆದುಕೊಂಡ ರೀತಿ ಆದರ್ಶ ಪ್ರಾಯವಾದುದು. ಲಾಲ್ ಬಹದ್ದೂರ್ ಕಾಲೇಜಿನ ವಿದ್ಯಾಸಂಸ್ಥೆಯ ಹೆಸರು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಎಂದು ಬದಲಾಗಿದೆ. ಅವರು ನಮ್ಮ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿದ್ದು ನಾನು ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದುದು ಒಂದು ಸುಯೋಗವೆಂದು ಇಂದಿಗೂ ಭಾವಿಸಿಕೊಂಡಿದ್ದೇನೆ.

ದಿವಂಗತ ಕೆ.ಜಿ. ಒಡೆಯರ್ ಅವರ ಜೀವನದ ಪರಿಚಯ ಈ ಕೆಳಗಿನಂತೆ ತಿಳಿಯ ಬಹುದಾಗಿದೆ. 1901ರಲ್ಲಿ ಕಾಗೋಡು ಗ್ರಾಮದಲ್ಲಿ ಜನನ. ವಿದ್ಯಾಭ್ಯಾಸ ಗೌರಮೆಂಟ್ ಕಾಲೇಜು ಶಿವಮೊಗ್ಗ, ಸೈಂಟ್ ಜೋಸೆಫ್ ಕಾಲೇಜು, ಬೆಂಗಳೂರು, ಮತ್ತು ಕಲ್ಕತ್ತಾದ ಸೈಂಟ್ ಪೌಲೂಸ್‌ ಕಾಲೇಜಿನಲ್ಲಿ ಬಿ.ಎ. 1936ರಲ್ಲಿ ಶ್ರೀಮತಿ ಕಮಲಮ್ಮನವರೊಡನೆ ವಿವಾಹ, ಮೂವರು ಗಂಡು ಮಕ್ಕಳು. ಮೂರು ಜನ ಹೆಣ್ಣು ಮಕ್ಕಳು. ಅಧ್ಯಕ್ಷರು ಡಿಸ್ಟಿಕ್ಸ್ ಡೆವಲಪ್‌ಮೆಂಟ್ ಕಮಿಟಿ ಶಿವಮೊಗ್ಗ ಮೈಸೂರು ಸರ್ಕಾರದ ಭೂ ಸುಧಾರಣಾಸಮಿತಿಯ ಸದಸ್ಯರಾಗಿ ನೇಮಕ. 1939ರಲ್ಲಿ 5 ವರ್ಷಗಳ ಕಾಲ ಸಾಗರ ತಾಲ್ಲೂಕು ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ. 1939ರಲ್ಲಿ ಭಾರತ ಸರ್ಕಾರದ ಫಾರ್ಮಸ್್ರ ಫೋರಂ ಗೌರ್ನಿಂಗ್ ಕಮಿಟಿಯ ಸದಸ್ಯರು. ಧ್ವಜ ಸತ್ಯಾಗ್ರಹದ ನಾಯಕತ್ವ, ಸಾಗರ ಸೊರಬದಲ್ಲಿ ಅರಣ್ಯ ಸತ್ಯಾಗ್ರಹದಲ್ಲಿ ಬಂಧನ, ಜೈಲುವಾಸ, 1952ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಉಪವಾಸ ಸತ್ಯಾಗ್ರಹ ಬಂಧನ, ಜೈಲುವಾಸ. 1952ರಲ್ಲಿ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಜಯ. 1957ರಲ್ಲಿ ಎರಡನೇ ಬಾರಿಗೆ ಲೋಕಸಭೆಯ ಪ್ರವೇಶ.ಕೆ.ಜಿ. ಒಡೆಯರವರು ಹೂತೋಟ, ಚಿತ್ರಕಲೆ, ಸಾಹಿತ್ಯ, ಸಂಗೀತ ಹಾಗೂ ಟೆನ್ನಿಸ್ ಆಟದಲ್ಲಿ ಆಸಕ್ತಿ ಉಳ್ಳವರಾಗಿದ್ದರು. ಸಾಗರದಲ್ಲಿ ಇರುವ ವೀರಶೈವ ವಿದ್ಯಾರ್ಥಿ ನಿಲಯಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕವಾಗಿ ಸಹಾಯ ಮಾಡಿದವರಾಗಿದ್ದಾರೆ.

Comments