Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಪ್ರದೀಪ್ ಈಶ್ವರ್ ಛಲ, ಹಠ, ಶ್ರದ್ಧೆ ಹಾಗೂ ಪರಿಶ್ರಮದಿಂದ ಅತ್ಯಂತ ಶ್ರದ್ಧೆಯಿಂದ ತಮ್ಮ ಬದುಕು ಕಟ್ಟಿಕೊಂಡವರು. ಅವರಲ್ಲಿ ಆಗಲೂ ಮತ್ತು ಈಗಲೂ ಇರುವುದು 'ಪರಿಶ್ರಮ'ವೊಂದೇ!


ಎರಡು ತಿಂಗಳ ಹಿಂದೆ, ಪ್ರದೀಪ್ ಈಶ್ವರ್ (ಮೊನ್ನೆ ಚಿಕ್ಕಬಳ್ಳಾಪುರದಿಂದ ಗೆದ್ದು ಶಾಸಕರಾದವರು) ಬರೆದ ಪುಸ್ತಕಕ್ಕೆ ನಾನು ಮುನ್ನುಡಿ ಬರೆದು, ನಮ್ಮ 'ವಿಶ್ವವಾಣಿ ಪುಸ್ತಕ' ಪ್ರಕಾಶನ ಸಂಸ್ಥೆಯಿಂದ ಪ್ರಕಟಿಸಿದ್ದೆ. ಆ ಪುಸ್ತಕ  ಬಿಡುಗಡೆಗೆ ಮುನ್ನವೇ ಮೂರು ಸಾವಿರ ಪ್ರತಿ ಮಾರಾಟವಾಗಿ ದಾಖಲೆ ಮಾಡಿತ್ತು. ಆಗ ನಾನು ಬರೆದ ಮುನ್ನುಡಿ ಇಲ್ಲಿದೆ :

ಶೀರ್ಷಿಕೆ : ಬೆಳಕಿನಂಥ ಭರವಸೆ ನೀಡುವ ಕೃತಿ! 

ಅಂದು ನಾನು ನೋಡಿದ ಪ್ರದೀಪ್ ಈಶ್ವರ್ ಇವರೇನಾ?

ಈ ಪ್ರಶ್ನೆ ನನ್ನಲ್ಲಿ ಅನೇಕ ಸಲ ಹಾದು ಹೋಗಿದೆ. ನಾನು ಕಳೆದ ಹದಿನೈದು ವರ್ಷಗಳಿಂದ ಪ್ರದೀಪ್ ಈಶ್ವರ್ ಅವರನ್ನು ನೋಡುತ್ತಾ ಬಂದಿದ್ದೇನೆ. ಈ ಅವಧಿಯಲ್ಲಿ ಅವರಲ್ಲಾದ ಪರಿವರ್ತನೆ, ಸುಧಾರಣೆ ಹಾಗೂ ಅವರ ಅಗಾಧ ಸಾಧನೆ ನನ್ನಲ್ಲಿ ಅವರ ಬಗ್ಗೆ ಮಾತ್ರ ಅಲ್ಲ, ಈ ಬದುಕಿನ ಬಗ್ಗೆಯೇ ಒಂದು ಹೊಸ ಸಾಧ್ಯತೆ, ಭರವಸೆಯನ್ನು ಮೂಡಿಸಿದೆ. ಅವರ ಬಗ್ಗೆ ವಿಶೇಷ ಅಭಿಮಾನವನ್ನೂ ಮೂಡಿಸಿದೆ. 

ಅಂದು ನಾನು ನೋಡಿದ ಪ್ರದೀಪ್ ಈಶ್ವರ್ ಅವರಲ್ಲಿ ಏನೂ ಇರಲಿಲ್ಲ. ಅವರು ಏನೂ ಆಗಿರಲಿಲ್ಲ. ಅವರಲ್ಲಿ ಅನಾಥ ಮತ್ತು ಅಮಾಯಕ ಭಾವವಷ್ಟೇ ಇತ್ತು. ಆದರೆ ಇಂದು ಅವರ ಹಿಂದೆ, ಅವರ 'ಪರಿಶ್ರಮ'ದಿಂದಾಗಿ ಕಲಿತ ಸುಮಾರು ಐದು ಸಾವಿರ ವೈದ್ಯರಿದ್ದಾರೆ. ಅವರೆಲ್ಲಾ ರಾಜ್ಯ ಮತ್ತು ದೇಶದ ವಿವಿಧ ಆಸ್ಪತ್ರೆಗಳಲ್ಲಿ 'ಕಣ್ಣಿಗೆ ಕಾಣುವ ದೇವರ' ಕೆಲಸ ಮಾಡುತ್ತಿದ್ದಾರೆ. 

ಪ್ರದೀಪ್ ಈಶ್ವರ್ ಅವರಲ್ಲಿ ಆಗಲೂ ಮತ್ತು ಈಗಲೂ ಇರುವುದು 'ಪರಿಶ್ರಮ'ವೊಂದೇ ! 

ಪ್ರದೀಪ್ ಈಶ್ವರ್ ಛಲ, ಹಠ, ಶ್ರದ್ಧೆ ಹಾಗೂ ಪರಿಶ್ರಮದಿಂದ ಅತ್ಯಂತ ಶ್ರದ್ಧೆಯಿಂದ ತಮ್ಮ ಬದುಕು ಕಟ್ಟಿಕೊಂಡವರು. ಅಷ್ಟೇ ಅಲ್ಲ, ಈ ಸಮಾಜವನ್ನು  ಕಟ್ಟಲು ಮುಂದಾದವರು. ಹದಿನೈದು ಜನ ವಿದ್ಯಾರ್ಥಿಗಳಿಂದ ಆರಂಭಿಸಿದ ಅವರ 'ಪರಿಶ್ರಮ ನೀಟ್ ಅಕಾಡೆಮಿ'ಯಲ್ಲಿ ಇಂದು ಸಾವಿರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗಾಗಿ ಕೋಚಿಂಗ್ ಪಡೆಯುತ್ತಿದ್ದಾರೆ. ಈಗಾಗಲೇ ಐದು ಸಾವಿರಕ್ಕೂ ಹೆಚ್ಚು ಮಂದಿ ಮೆಡಿಕಲ್ ಸೀಟು ಗಿಟ್ಟಿಸಿಕೊಂಡು ವೈದ್ಯರಾಗಿದ್ದಾರೆ. ಇವೆಲ್ಲ ನಮ್ಮ ಮುಂದೆಯೇ ಆದ ಪವಾಡ. ಪ್ರದೀಪ್ ಈಶ್ವರ್ ನನ್ನ ಮುಂದೆಯೇ ಮಾಡಿದ ಪವಾಡ ಎಂಬುದೇ ನನಗೆ ಹೆಚ್ಚಿನ ಸಂತಸ ಮತ್ತು ಸಮಾಧಾನ. ಅವರ ಈ ಅದ್ಭುತ ಸಾಧನೆಗೆ ನಾನು ಪ್ರತ್ಯಕ್ಷದರ್ಶಿ ಮತ್ತು ಸಹ ಪಥಿಕ ಎಂಬುದೇ ಅತೀವ ಹೆಮ್ಮೆ ಹಾಗೂ ಗರ್ವ. 

ಪ್ರದೀಪ್ ಹಣ ಮಾಡಲೆಂದು ಕ್ಲಾಸ್ ರೂಮಿಂದ ಹೊರ ಬಂದು ನಡೆಸುತ್ತಿರುವ ಕೋಚಿಂಗ್ ಕ್ಲಾಸ್ ಇದಲ್ಲ. ಸ್ವತಃ ಬದುಕಿನಲ್ಲಿ ನೊಂದು, ನರಳಿ, ನವೆದು, ನಂತರ ಕಷ್ಟಪಟ್ಟು ತಮ್ಮ ಬಾಳಿನಲ್ಲಿ ನಲಿವನ್ನು ತುಂಬಿಕೊಂಡವರು. ಜತೆಗೆ ಈ ಕಾಲದ ಯುವಕರಿಗೆ ಬದುಕಿನ ಸಾಧ್ಯತೆಗಳ ಗಮ್ಯವನ್ನು ಹೇಳಿ, ಅವರಲ್ಲಿ ನೂರಾರು ಕನಸುಗಳನ್ನು ಅರಳಿಸಿ, ಅವರನ್ನು ಹೊಸ ಹುರುಪಿಗೆ ಸಿದ್ಧ ಮಾಡಿದವರು. ತಮ್ಮ ವಿಶಿಷ್ಟ ಕೋಚಿಂಗ್ ಮೂಲಕ,  ನೀಟ್ ಪರೀಕ್ಷೆಗೆ ಅವರನ್ನು ರೂಪಿಸಿ, ಈ ಸಮಾಜ ಹಂಬಲಿಸುವ ವೈದ್ಯರನ್ನಾಗಿ ಮಾಡಿದವರು. ನಾವೊಂದೇ ಅಲ್ಲ, ಬೇರೆಯವರ ಬಾಳಿನಲ್ಲಿ ಬದುಕುವುದು ಈ ಸಮಾಜ ಗೌರವಿಸುವ ಉದಾತ್ತ ಮೌಲ್ಯ. ಪ್ರದೀಪ್ ಈಶ್ವರ್ ಬೇರೆಯವರ ಬಾಳಿಗೆ ಆಸರೆಯಾಗಿದ್ದಾರೆ. ಆ ಮೂಲಕ ಅವರ ಬದುಕಿನಲ್ಲೂ ನೆಲೆಸಿದ್ದಾರೆ. 

ಅಂಥ ಪ್ರದೀಪ್ ಈಶ್ವರ್ ಒಂದು ಅಂಕಣ ಬರೆದರೆ ಹೇಗಿರುತ್ತದೆ?

ನಾನು ಬಹಳ ದಿನಗಳಿಂದ ಆಲೋಚಿಸುತ್ತಿದ್ದೆ. ಕಾರಣ ಪ್ರದೀಪ್ ಈಶ್ವರ್ ಪುಸ್ತಕ ಓದಿಕೊಂಡು, ವ್ಯಕ್ತಿತ್ವ ವಿಕಸನ ಕೋರ್ಸ್ ನಲ್ಲಿ ಭಾಗವಹಿಸಿ ಪ್ರೇರಣೆಯನ್ನು ಗಿಟ್ಟಿಸಿಕೊಂಡವರಲ್ಲ. ತಮ್ಮ ಬದುಕನ್ನೇ ವಿಕಸನಗೊಳಿಸಿಕೊಂಡು ಮಾದರಿ ವ್ಯಕ್ತಿತ್ವ ಬೆಳೆಸಿಕೊಂಡವರು. ಇಂಥವರು ಮಾತ್ರ ಬೇರೆಯವರಿಗೆ ನಿಜವಾದ ಪ್ರೇರಣೆ, ಸ್ಫೂರ್ತಿ ನೀಡಬಲ್ಲರು. ಅಷ್ಟಕ್ಕೂ ಪ್ರದೀಪ್ ಈಶ್ವರ್ ಬೇರೆಯವರು ಕಡೆದಿಟ್ಟ ಮೂರ್ತಿಯಲ್ಲ. ಅವರು ತಮ್ಮನ್ನೇ ಕಡೆದುಕೊಂಡ ಶಿಲ್ಪಿ. ಇಂಥವರು ಬರೆದರೆ ಅದರ ಸತ್ವವೇ ಬೇರೆ. 

ಪ್ರದೀಪ್ ಈಶ್ವರ್ ಬರೆಯಲು ಆರಂಭಿಸಿದರು. ಸಹಜವಾಗಿ ಅವರ ಅಂಕಣ ಅಸಂಖ್ಯ ಓದುಗರನ್ನು ತಲುಪಿತು, ತಟ್ಟಿತು. ಅದಕ್ಕೆ ಕಾರಣ ಪ್ರದೀಪ್ ಬಾಳಿದ ರೀತಿ ಮತ್ತು ಹೇಳಿದ ರೀತಿ. ಹಸಿದವನ ಮುಂದೆ ಅವರು ಉಪದೇಶ ಹೇಳಲಿಲ್ಲ. ಆತನ ಹಸಿವು ನೀಗುವುದಕ್ಕೆ ಏನು ಬೇಕೋ ಅದನ್ನು ನೀಡಿದರು. ಅದೇ ಅವರ ಬರವಣಿಗೆಯ ಕಾಣ್ಕೆ ಎಂದು ನಾನು ಭಾವಿಸಿದ್ದೇನೆ. ಯಾವುದೋ ಗೊಡ್ಡು, ಸವಕಲು ವಾಕ್ಯ, ಯಾರೋ ಹೇಳಿದ ಕಥೆ, ಅದೇ ಅದೇ ಚರ್ವಿತಚರ್ವಣಗಳ ಬದಲು ತಂಗಾಳಿಯ ತಾಜಾತನದಂತೆ ತಮ್ಮ ವಿಚಾರಗಳನ್ನು ಬೀಸಿದ್ದಾರೆ. ಅವರು ಇಲ್ಲಿ ಹೇಳಿದ ವಿಷಯಗಳು ಅವರಿಗೆ, ಇವರಿಗೆ ಮಾತ್ರವಲ್ಲ, ಎಲ್ಲರಿಗೂ ಹಿಡಿಸುವಂಥವು, ಕಾಡಿಸುವಂಥವು. 

ಕೊನೆಯಲ್ಲಿ ಉಳಿಯುವುದು ಬದುಕಿನ ಬಗ್ಗೆ ಅದಮ್ಯ ವಿಶ್ವಾಸ ಮತ್ತು ಬೆಳಕಿನಂಥ ಭರವಸೆ. ಒಂದು ಕೃತಿಗೆ ಇದಕ್ಕಿಂತ ಹೆಚ್ಚಿನ ಬಡಿವಾರ ಏನು ಬೇಕು? ಅವರ 'ಪರಿಶ್ರಮ' ನೀಟ್ ಅಕಾಡೆಮಿ ಒಂದು ತೂಕವಾದರೆ, ಅವರು ತುಂಬುವ ಆತ್ಮವಿಶ್ವಾಸ ಇನ್ನೊಂದು ತೂಕ. ಈ ಕೃತಿಯಿಂದ ನಿಮಗೂ ಪ್ರದೀಪ್ ಈಶ್ವರ್ ಆಪ್ತವಾಗಬಹುದು. ಈ ಪುಸ್ತಕದಿಂದ ಕೆಲವು ವಿಚಾರಗಳನ್ನಷ್ಟೇ ಅಲ್ಲ, ಒಬ್ಬ ಅಪರೂಪದ ವ್ಯಕ್ತಿಯನ್ನೂ ನೀವು ಪರಿಚಯಿಸಿಕೊಳ್ಳುತ್ತೀರಿ. ಈ ಪುಸ್ತಕವನ್ನು 'ವಿಶ್ವವಾಣಿ ಪುಸ್ತಕ' ಖುಷಿಖುಷಿಯಿಂದ ಪ್ರಕಟಿಸುತ್ತಿದೆ. 

(ವಿಶೇಷ ಸೂಚನೆ : ಈ ಪುಸ್ತಕ ಬೇಕಾದವರು 636 239 3966 ಗೆ ಕರೆ ಮಾಡಿ. ಅಮೆಜಾನ್ ನಲ್ಲೂ ಲಭ್ಯ)

Comments