ಮೊನ್ನೆ ಮೊದಲ ಕ್ವಾಲಿಫೈರ್ ಪಂದ್ಯದಲ್ಲಿ ನಡೆದ ಆ ಘಟನೆ ಇಂದಿಗೂ ಚರ್ಚೆಯಲ್ಲಿದೆ. ಧೋನಿ ಹೇಟರ್ಸ್ ಬಾಯಿಗೆ ಆಹಾರವಾಗಿದೆ. ವರದಿಗಳ ಪ್ರಕಾರ ಮಾಜಿ ಅಂಪೈರ್ ಹಾರ್ಪರ್ ಇದನ್ನು ಖಂಡಿಸಿದ್ದಾರೆ. ಕಾಮೆಂಟರಿ ಮಾಡ್ತಾ ಇದ್ದ ಸುನಿಲ್ ಗಾವಸ್ಕರ್...ಮೊನ್ನೆಯಷ್ಟೇ ಧೋನಿ ಕೈಲಿ ಹಸ್ತಾಕ್ಷರ ಹಾಕಿಸ್ಕೊಂಡು ಎಮೋಷನಲ್ ಆಗಿ ಮಾತಾಡಿದ್ದ ಸುನಿಲ್ ಗಾವಸ್ಕರ್ ಕೂಡ ಈ ಘಟನೆಯನ್ನು ಕಂಡು ಧೋನಿಯ ಕ್ರೀಡಾಸ್ಫೂರ್ತಿ ವಿರುದ್ಧದ ನಡೆಗೆ ಆ ಕ್ಷಣ ಅಸಮಾಧಾನ ತೋರಿದನಂತೆ.
ತಕ್ಷಣಕ್ಕೆ ನೋಡಿದರೆ ಒಮ್ಮೆ ಅದು ಧೋನಿಯ ಚಾಣಾಕ್ಷತೆ ಅಂತ ಅನಿಸುತ್ತದೆ. ಇನ್ನು ಕೆಲವರಿಗೆ ಇದು ಧೋನಿಯ ಕೆಟ್ಟ ಸ್ಪೋರ್ಟ್ಸ್ ಮನ್ ಸ್ಪಿರಿಟ್ ಅನಿಸುತ್ತೆ. ಇನ್ನು ಕೆಲವರಿಗೆ ಧೋನಿಯ ಕೊಳಕುತನ, ದುರಹಂಕಾರ ಏನೇನೋ ಅನಿಸಿರುತ್ತದೆ.
ನಂಗೇನು ಅನಿಸಿತು ಅಂತ ನಾನು ಇಲ್ಲಿ ಹೇಳಿಕೊಳ್ಳುತ್ತೇನೆ. ಆ ಜಾಗದಲ್ಲಿ ಕೊಹ್ಲಿ ಬಾಬರ್ ಶರ್ಮ ಪಾಂಡ್ಯ ಯಾರೇ ಇದ್ದರೂ ನನ್ನದು ಇದೇ ಅಭಿಪ್ರಾಯ ಇರುತ್ತಿತ್ತು.
ನಡೆದದ್ದು ಇಷ್ಟು.
ಸಿಎಸ್ಕೆಯಲ್ಲಿ ಅದಾಗಲೇ ಜಡೇಜ ತೀಕ್ಷಣ ತಮ್ಮ ಕೋಟಾದ ನಾಲ್ಕು ಓವರ್ ಎಸೆದಾಗಿದೆ.
ತುಷಾರ್ ಎರಡು ಓವರ್ ಹಾಕಿದ್ದಾನೆ. ಇಂಪ್ಯಾಕ್ಟ್ ಪ್ಲೇಯರ್ ಪಥಿರಾಣ ಒಂದು ಓವರ್ ಬೌಲ್‌ಮಾಡಿದ್ದಾನೆ.
ಒಟ್ಟು ಹದಿನೈದು ಓವರ್ ಆಗಿದೆ.
ಇನ್ನು ಮಿಕ್ಕ ಐದು ಓವರ್ ಗಳಲ್ಲಿ ಹದಿನಾರು ಹದಿನೆಂಟು ಇಪ್ಪತ್ತು ಪಥಿರಾಣ ಕೈಲಿಹಾಕಿಸೋದು.. ತುಷಾರ್ ಹದಿನೇಳು ಹತ್ತೊಂಬತ್ತು ಹಾಕೋದು ಅಂತ ಧೋನಿ ಪ್ಲಾನ್‌ಮಾಡಿ ಆಗಿದೆ.
ಆ ಹಂತದಲ್ಲಿ ಮೊಯಿನ್ ಅಲಿಗೋ ಶಿವಂದುಬೆಗೋ ಬಾಲ್ ಕೊಟ್ಟು ರಿಸ್ಕ್ ತಗೋಳೋ ಸ್ಥಿತಿಯಲ್ಲಿಲ್ಲ ಧೋನಿ.
ಅವನು ಪಕ್ಕಾ ಇದ್ದ. ಬೌಲಿಂಗ್ ಚೇಂಜ್ ತುಂಬ ಪ್ಲಾನಿಂದ ಮಾಡಿದ್ದ. ಡೆತ್ ಬೌಲಿಂಗಿಗಾಗಿಯೇ ಪಥಿರಾಣನನ್ನು ಇಟ್ಟುಕೊಂಡಿದ್ದ.
ಇಂಥ ಹೊತ್ತಲ್ಲೇ ತಾಂತ್ರಿಕ ಸಮಸ್ಯೆ ಅಡ್ಡ ಬಂತು.
ಒಂದು ಓವರ್ ಬೌಲ್ ಮಾಡಿದ್ದ ಪಥಿರಾಣ ಆ ನಂತರ ಒಂಬತ್ತು ನಿಮಿಷಗಳ ಕಾಲ ಮೈದಾನದಿಂದ ಆಚೆ ಇದ್ದ. ಆ ನಂತರ ಮೈದಾನಕ್ಕೆ ವಾಪಸ್‌ಬಂದು ಐದು ನಿಮಿಷವಷ್ಟೇ ಆಗಿತ್ತು.
ನಿಯಮದ ಪ್ರಕಾರ ಆಟಗಾರ ಮತ್ತೆ ಬೌಲ್‌ಮಾಡಬೇಕು ಅಂದ್ರೆ ಆತ ಹೊರಗೆ ಕಳೆದಷ್ಟೇ ಸಮಯ ಮೈದಾನದೊಳಗೆ ಬಂದಮೇಲೂ ಕಳೆದಿರಬೇಕು. ಅಂದ್ರೆ ಪಥಿರಾಣ ಒಂಬತ್ತು ನಿಮಿಷದ ನಂತರ ಬೌಲ್‌ಮಾಡಲು ಅರ್ಹನಾಗ್ತಾನೆ.
ಹೀಗಿರುವಾಗ
ಹದಿನಾರನೇ ಓವರ್ ಮಾಡೋ ಸಮಯ ಬಂದಿದೆ. ಪಥಿರಾಣಗೆ ಬೌಲಿಂಗ್ ಕೊಡಬೇಕು. ಆದರೆ ಕೊಡುವಂತಿಲ್ಲ. ನಾಲ್ಕು ನಿಮಿಷದ ನಂತರವಷ್ಟೇ ಕೊಡಬಹುದು.
ಆಗ ಧೋನಿಗಿದ್ದ ಆಯ್ಕೆ ಒಂದೋ ಬೇರೆ ಬೌಲರ್ ಕೈಲಿ ಬಾಲ್‌ಹಾಕಿಸುವುದು. ಮೊಯಿನ್ ಅಲಿ ಅಥವಾ ಶಿವಂ ದುಬೆಗೆ ಕೊಡಬೇಕು. ಅಥವಾ ತುಷಾರ್ ಕೈಲಿ ಮಾಡಿಸಬೇಕು.
ತುಷಾರ್ ಈ ಓವರ್ ಹಾಕಿದ್ರೂ ಇನ್ಯಾರೋ ಈ ಓವರ್ ಹಾಕಿದ್ರೂ ಪಥಿರಾಣ ಮಾಡಬೇಕಿದ್ದ ಒಂದು ಓವರ್ ಮಿಸ್ ಆಗುತ್ತದೆ. ಅಲ್ಲಿಗೆ ಪ್ಲಾನ್ ಪೂರ್ತಿ ಹಾಳಾಗುತ್ತದೆ. ಅದು ಮ್ಯಾಚ್ ಸೋಲಿಸಿಬಿಡಬಹುದು.
ಹೀಗಿದ್ದಾಗ ಧೋನಿ ಅಂಪೈರ್ ಜೊತೆ ಚರ್ಚೆಗಿಳಿದ.
ಅವನಿಗೇನೂ ಈ ರೂಲ್ ಗೊತ್ತಿಲ್ಲ ಅಂತೇನಲ್ಲ. ಅದು ಉದ್ದೇಶಪೂರ್ವಕವಾಗಿ ಮಾಡಿದ ಟೈಂಕಿಲ್ಲಿಂಗ್. ನಾಲ್ಕು ನಿಮಿಷ ಕಾಲಹರಣ ಮಾಡಿ ಪಥಿರಾಣನನ್ನು ಬೌಲಿಂಗಿಗೆ ಎಲಿಜಿಬಲ್ ಮಾಡೋ ತಂತ್ರ.
ಇದು ಈಗ ವಿವಾದಕ್ಕೀಡಾಗಿರೋದು.
ಧೋನಿ ಇಲ್ಲಿ ಆ ನಿಯಮವನ್ನು ಪ್ರಶ್ನಿಸಲಿಲ್ಲ.
ಮುರಿಯಲೂ ಇಲ್ಲ.
ರಿಲ್ಯಾಕ್ಸ್ ಮಾಡಲು ಕೇಳಿಕೊಳ್ಳಲೂ ಇಲ್ಲ.
ಜಾಣ್ಮೆಯಿಂದ ನಾಲ್ಕು ನಿಮಿಷ ಕಳೆದುಹೋಗುವಂತೆ ಮಾಡಿದ.
ಅಲ್ಲಿಗೆ ಒಂಬತ್ತು ನಿಮಿಷ ಮೈದಾನದಲ್ಲಿ ಕಳೆದ ಪಥಿರಾಣಗೆ ಬೌಲ್‌ಮಾಡಲು ಅರ್ಹತೆ ಸಿಕ್ಕಿತು.
ಧೋನಿ ಇಲ್ಲಿ ಆಡಿದ್ದು ಮೋಸದಾಟವಾ?
ನನ್ನ ಕೇಳಿದ್ರೆ ಖಂಡಿತ ಅಲ್ಲ ಅಂತೀನಿ.
ಧೋನಿ ಅಂಪೈರ್ ಗಳ ಜೊತೆ ಮಾತಾಡದೆಯೇ ಡ್ರಿಂಕ್ಸೋ ಇನ್ನೊಂದೋ ತರೋಕೆ ಹೇಳಿಯೂ ಟೈಮ್ ವೇಸ್ಟ್ ಮಾಡಬಹುದಿತ್ತೇನೋ... ಬೌಲರ್ ಜೊತೆ ಚರ್ಚೆ ಮಾಡೋನಾಟಕಮಾಡಿಯೂ ಟೈಮ್ ವೇಸ್ಟ್ ಮಾಡಬಹುದಿತ್ತೇನೋ.. ಅಥವಾ ಇಂಜುರಿ ನಾಟಕವಾಡಿ ನಾಲ್ಕು ನಿಮಿಷ ತಿನ್ನಬಹುದಿತ್ತೇನೋ..ಆಗ ಯಾರ ಅರಿವಿಗೂ ಇದು ಬರುತ್ತಿರಲೇ ಇಲ್ವೇನೋ...
ಆದರೆ ಧೋನಿ ಅಂಪೈರ್ ಜೊತೆಮಾತುಕತೆ ನಡೆಸಿದ ದೃಶ್ಯಾವಳಿಗಳು ಪ್ರಸಾರ ಆಗಿದ್ದರಿಂದ ಇದು ಕಣ್ಣಿಗೆ ರಾಚಿತು.
ಧೋನಿಯ ಈ ತಂತ್ರ ತಪ್ಪಲ್ಲ.
ಮಂಕಡಿಂಗ್ ಮಾಡುವುದು ಹೇಗೆ ರೂಲ್ಸ್ ಪ್ರಕಾರ ಇದೆಯೋ... ಇದು ಕೂಡ ರೂಲ್ಸ್ ಒಳಗೆಯೇ ಇದೆ.
ಒಂದುವೇಳೆ ಇದು ನಿಯಮದ ವಿರುದ್ಧ ಇದ್ದಿದ್ದರೆ ಎದುರಾಳಿ ತಂಡ ಅಕ್ಷೇಪಿಸುತ್ತಿತ್ತು. ಬೌಲ್ ಮಾಡಲು ಅಂಪೈರ್ ಅವಕಾಶ ನೀಡ್ತಾ ಇರಲಿಲ್ಲ. ಧೋನಿ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು.
ಅಂಪೈರ್ ಗೆ ಇದರ ವಿರುದ್ಧ ದನಿ ಎತ್ತಲು ಸಾಧ್ಯವೇ ಇರಲಿಲ್ಲ.
ನಾಲ್ಕು ನಿಮಿಷ ಇನ್ನಿಂಗ್ಸ್ ವಿಳಂಬ ಆಗಿದ್ದಕ್ಕೆ... ಕೊನೆಯ ಓವರಲ್ಲಿ ಫೀಲ್ಡಿಂಗ್ ರಿಸ್ಟ್ರಿಕ್ಟ್ ಮಾಡಬಹುದು.ಅಥವಾ ಧೋನಿಗೆ ಸ್ಲೋ ಓವರ್ ರೇಟ್ ಅಂತ ದಂಡ ಹಾಕಬಹುದು..ರಿಪೀಟ್ ಅಫೆನ್ಸ್ ಆಗಿದ್ದಲ್ಲಿ ಒಂದು ಪಂದ್ಯ ಬ್ಯಾನ್ ಮಾಡಬಹುದು.
ಇದೆಲ್ಲ ಒಟ್ಟು ಓವರ್ ಗಳು ನಿಗದಿತ ಸಮಯದಲ್ಲಿ ಮುಗಿದಿಲ್ಲವಾದರೆ ಮಾತ್ರ. Or else no problem at all.
ಅಂದ್ಮೇಲೆ ಇಲ್ಲಿ ವಿವಾದಕ್ಕೆ ಆಸ್ಪದ ಎಲ್ಲಿದೆ. ಸ್ಪಿರಿಟ್ ಆಫ್ ದ ಗೇಮ್ ಅನ್ನೋದು ರೂಲ್ಸ್ ನಿಂದ ಡೀವಿಯೇಟ್ ಆದಾಗ ಬರಬಹುದು.. ಅಥವಾ ಮಾನವೀಯತೆ ಪ್ರಶ್ನೆ ಬಂದಾಗ ಬರಬಹುದು. ಇಂಥ ಹೊತ್ತಲ್ಲಲ್ಲ. ಇದು ಪ್ಯೂರ್ ಕ್ರಿಕೆಟ್ ಮೈಂಡ್. ಮಂಕಡಿಂಗ್ ಎಷ್ಟು ನಿಯಮಬದ್ಧವೋ ಇದು ಕೂಡ ಅಷ್ಟೇನಿಯಮ ಬದ್ಧ. ನಿಯಮದ ಅಡಿಯಲ್ಲಿ ಗೆಲ್ಲಲು ಏನೇ ಮಾಡಿದರೂ ತಪ್ಪಲ್ಲವೇ ಅಲ್ಲ.
ಇದು ನನ್ನ ಅಭಿಪ್ರಾಯ.
(ಒಂದು ಲೈನ್ ಸೇರಿಸೋಕೆ ಮರೆತಿದ್ದೆ. ಧೋನಿಯ ಈ ಚಾಣಾಕ್ಷತೆ ನನಗೆ ......ಶ್ರೀಕೃಷ್ಣ ಸೂರ್ಯನಿಗೆ ಸುದರ್ಶನ ಚಕ್ರ ಅಡ್ಡ ಹಿಡಿದು ತಾತ್ಕಾಲಿಕ ಕತ್ತಲೆ ಮಾಡಿ ಜಯದ್ರಥನನ್ನು ಮುಗಿಸೋ ತಂತ್ರ ಹೂಡಿದ ಕಥೆ ನೆನಪಿಸಿತು.)
Comments
Post a Comment