Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಕಾನೂನಾತ್ಮಕವಾಗಿ ನಡೆಯುವ ಜೀತಪದ್ದತಿ ಆರಂಭವಾಗುವ ಮುನ್ಸೂಚನೆ.


ಚೈನಾದಲ್ಲಿ ಕಬ್ಬಿಣದ ಅದಿರು ಮತ್ತಿತ್ಯಾದಿ ಖನಿಜಸಂಪತ್ತು, ಔಷಧೀಯ ಕಚ್ಚಾಸಾಮಗ್ರಿಗಳ ಸಂಪತ್ತು ಹೇರಳವಾಗಿ ಇದ್ದರೂ ಅದು ತನ್ನ ದೇಶದಲ್ಲಿ ಹೆಚ್ಚು ಗಣಿಗಾರಿಕೆ ಮಾಡದೇ, ತನ್ನ ದೇಶದ ಸಂಪತ್ತನ್ನು ಬರಿದು ಮಾಡಿಕೊಳ್ಳದೇ ಭಾರತದಂತಹ 'ಮುಂದುವರೆಯುತ್ತಲೇ ಇರುವ' ದೇಶಗಳಿಂದ ಮತ್ತು ಬಡದೇಶಗಳಿಂದ ದುಬಾರಿ ಬೆಲೆ ತೆತ್ತು ಸಂಪತ್ತನ್ನು ಆಮದು ಮಾಡಿಕೊಳ್ಳುತ್ತದೆ. ಹಾಗೆ ಆಮದು ಮಾಡಿಕೊಂಡ ಕಚ್ಚಾವಸ್ತುಗಳಿಂದ ಬಳಕೆಗೆ ಬೇಕಾಗುವ ಪ್ರಾಡಕ್ಟ್ ಸಿದ್ಧಪಡಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತ ತನ್ನ ದೇಶದ ಆರ್ಥಿಕ ಸಂಪತ್ತನ್ನು ಭದ್ರಮಾಡಿಕೊಳ್ಳುತ್ತಿದೆ. ಅಗ್ಗದ ಬೆಲೆಗೆ ಸಿದ್ಧವಾಗುತ್ತದೆ ಎಂಬ ಕಾರಣಕ್ಕೆ ಮುಂದುವರೆದ ದೇಶಗಳು ಸಹ ತಮ್ಮ ಕಂಪನಿಗಳನ್ನು ಆ ದೇಶದಲ್ಲಿ ಸ್ಥಾಪಿಸಿ, ತಮ್ಮ ದೇಶದ ಕಚ್ಚಾವಸ್ತುಗಳನ್ನು ಆ ದೇಶಕ್ಕೆ ರಫ್ತು ಮಾಡಿ, ಅಲ್ಲಿ ವಸ್ತುಗಳನ್ನು ಸಿದ್ಧಪಡಿಸಿಕೊಂಡು ತಮ್ಮ ದೇಶಕ್ಕೂ ಆಮದು ಮಾಡಿಕೊಂಡು, ಚೈನಾದ ಮೂಲಕ ಜಗತ್ತಿನ ಇತರೆ ದೇಶಗಳಿಗೂ ರಫ್ತು ಮಾಡಿಸುತ್ತವೆ. ಹೀಗೆ ಚೈನಾ ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ಇಡೀ ಜಗತ್ತು ತನ್ನ ಬಂಡವಾಳ ಹೂಡುತ್ತದೆ. ಈ ಪ್ರಕ್ರಿಯೆಯಲ್ಲಿ ಚೀನಾ ದೇಶಕ್ಕೆ ದೊಡ್ಡ ಲಾಭವಿಲ್ಲದೇ ಇರಬಹುದು, ಕೆಲವು ಕ್ಷೇತ್ರಗಳಲ್ಲಿ ಅದು ನಷ್ಟವನ್ನೂ ಅನುಭವಿಸಬಹುದು. ಆದರೆ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಆ ದೇಶದ ನಾಗರೀಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. 

ಚೈನಾ ದೇಶದ ದೂರದೃಷ್ಟಿ ಇನ್ನೂ ದೊಡ್ಡದು. ಜಗತ್ತಿನ ಎಲ್ಲ ದೇಶಗಳ ಸಂಪತ್ತು ಬರಿದಾದ ಮೇಲೆ ಅದು ತನ್ನ ದೇಶದ ಸಂಪತ್ತನ್ನು ಬಳಸಿಕೊಳ್ಳಲು ಸಿದ್ಧವಾಗುತ್ತದೆ. ಆಗ ಇಡೀ ಜಗತ್ತು ಚೀನಾದ ಮೇಲೆ ಅವಲಂಬಿತವಾಗುವ ಸ್ಥಿತಿ ಬರುತ್ತದೆ. ಇಂದು ಅಗ್ಗದ ಬೆಲೆಗೆ ಬಿಕರಿ ಮಾಡುತ್ತಿರುವ ಚೈನಾ ಮುಂದೆ ತನ್ನ ದೇಶದ ಉತ್ಪನ್ನಗಳ ಬೆಲೆಯನ್ನು ಹಲವು ಪಟ್ಟು ಹೆಚ್ಚಿಸಿದರೂ ಜಗತ್ತಿನ ಎಲ್ಲಾ ದೇಶಗಳು ಬೇರೆ ದಾರಿ ಇಲ್ಲದೇ ಕೊಂಡುಕೊಳ್ಳಲೇಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಆ ಮೂಲಕ ಚೈನಾ ವಿಶ್ವದ ದೊಡ್ಡಣ್ಣನಾಗುವತ್ತ ಹೊರಟಿದೆ. ದೇಶವನ್ನು ಜಗತ್ತಿನ ನಂಬರ್ ಒನ್ ಮಾಡುವ, ವಿಶ್ವಗುರುವಾಗಿಸುವ ಮಹತ್ವಾಕಾಂಕ್ಷೆಯನ್ನು ಚುನಾವಣೆಗಳ ಗಿಮಿಕ್ಕುಗಳಿಗೆ ಮೀಸಲಾಗಿಟ್ಟಿರುವ ಭಾರತದ ದೇಶದ ರಾಜಕಾರಣಿಗಳಿಗೆ ಈ ಮಟ್ಟಿಗಿನ ದೂರದೃಷ್ಟಿ ಎಂದಿಗೂ ಬರಲಾರದು. ಅವರೆಲ್ಲಾ ತಮ್ಮ ತಮ್ಮ ಕುಟುಂಬಗಳು ಹತ್ತು-ಇಪ್ಪತ್ತು ತಲೆಮಾರುಗಳಿಗೆ ಆಗುವಷ್ಟು ಸಂಪತ್ತನ್ನು ಕೂಡಿಡುವುದರಲ್ಲಿ ಮಗ್ನರಾಗಿದ್ದಾರೆ. ದೇಶದ ಸಂಪತ್ತು ಬರಿದಾಗುತ್ತಲೇ ಇದೆ, ಜನಸಂಖ್ಯೆಯ ಜೊತೆಜೊತೆಗೆ ನಿರುದ್ಯೋಗವೂ ಹೆಚ್ಚುತ್ತಿದೆ‌. ಸಂಪತ್ತು ಇದ್ದಾಗಲೇ ಉದ್ಯೋಗ ಸೃಷ್ಟಿಸಲಾರದವರು, ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡಬಲ್ಲರೇ? 

ಈಗ ಭಾರತ ದೇಶದಲ್ಲಿರುವ ಬಹುತೇಕ ಕಂಪನಿಗಳು ಹೊರದೇಶಗಳದ್ದು. ಭವಿಷ್ಯದಲ್ಲಿ ಚೈನಾ ಸೇರಿ ಜಗತ್ತಿನ ಇತರೆ ಮುಂದುವರೆದ ದೇಶಗಳು ಭಾರತದಲ್ಲಿ ಇನ್ನೂ ಹೆಚ್ಚಿನ ಕಾರ್ಖಾನೆಗಳನ್ನು ಸ್ಥಾಪಿಸಿ ಇಲ್ಲಿನ ಜನರಿಗೆ ಕೆಲಸ ಕೊಡಬಹುದು. ಇಲ್ಲಿನ ಅಳಿದುಳಿದ ಸಂಪತ್ತನ್ನು ಆ ಕಂಪನಿಗಳು ಬಳಸಿಕೊಳ್ಳಬಹುದು. ಅವರ ಕಾರ್ಖಾನೆಗಳಲ್ಲಿ, ಕಂಪನಿಗಳಲ್ಲಿ ದುಡಿಯವ ಭಾರತದ ಜನರಿಗೆ ಸಂಬಳ ಸಿಗುತ್ತದೆ, ಭಾರತ ಸರ್ಕಾರಕ್ಕೆ, ರಾಜ್ಯ ಸರ್ಕಾರಗಳಿಗೆ ಚಿಲ್ಲರೆ ತೆರಿಗೆ ಮೊತ್ತ‌ ಸಿಗುತ್ತದೆ, ಆ ಮೊತ್ತ  ರಸ್ತೆಗಳಿಗೆ ಕಾಂಕ್ರೀಟ್ ಹಾಕಿಸುವುದಕ್ಕೆ, ಮೋರಿ ಕ್ಲೀನ್ ಮಾಡಿಸುವುದಕ್ಕೆ, ರೇಷನ್ ಅಕ್ಕಿ ಕೊಡುವುದಕ್ಕೆ, ಪತ್ರಿಕೆಗಳ ಮುಖಪುಟದಲ್ಲಿ, ನ್ಯೂಸ್ ಚಾನೆಲ್ಲುಗಳಲ್ಲಿ, ರಸ್ತೆ ಬದಿಯ ಹೋರ್ಡಿಂಗುಗಳಲ್ಲಿ "ಆಯಾ ಕಾಲಘಟ್ಟದ ಮಾನ್ಯ ಪ್ರಧಾನಂತ್ರಿಗಳ, ಮುಖ್ಯಮಂತ್ರಿಗಳ ಸಾಧನೆಗಳ ಜಾಹೀರಾತು" ಕೊಡಲು ಸಾಕು. ವಿದೇಶಿ ಕಂಪನಿಗಳು ಕೊಡುವ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ ಫಂಡ್ (CSR fund) ಈ ದೇಶದ ಬಡಸಮಾಜಕ್ಕೆ ನೀಡುವ ಸೇವೆಯ ಸೋಗಿನಲ್ಲಿ ಪೋಲಾಗಿಹೋಗುತ್ತದೆ. ಕಟ್ಟಕಡೆಗೆ ಇಡೀ ಭಾರತ ದೇಶದ ನೆಲ ವಿದೇಶಿ ಕಂಪನಿಗಳ ಇಂಡಸ್ಟ್ರಿಯಲ್ ಏರಿಯಾ ಆಗಿ ಮಾತ್ರ ಉಳಿಯುತ್ತದೆ. ಪೋರ್ಚುಗೀಸರು, ಫ್ರೆಂಚರು, ಬ್ರಿಟೀಷರ ಗುಲಾಮರಾಗಿದ್ದ ಜನ ಸ್ವಾತಾಂತ್ರ್ಯನಂತರ ರಾಜಕಾರಣಿಗಳ, ಆಳುವವರ ಗುಲಾಮರಾಗಿದ್ದೇವೆ. ಭವಿಷ್ಯದಲ್ಲಿ ರಾಜಕಾರಣಿಗಳು, ಪ್ರಜೆಗಳು ಎಲ್ಲರೂ ವಿದೇಶಿ ಕಂಪನಿಗಳ ಗುಲಾಮರಾಗಿ ಉಳಿಯುವುದಷ್ಟೇ. ಕಾನೂನಾತ್ಮಕವಾಗಿ ನಡೆಯುವ ಜೀತಪದ್ದತಿಗೆ ನಾವೆಲ್ಲಾ ಇಂದಿನಿಂದಲೇ ಸಜ್ಜಾಗುವುದು ಉತ್ತಮ.‌ 

ಉಳಿದವರು ಅವರವರ ಅರೆಬರೆ ಜ್ಞಾನದಲ್ಲಿ ಶಿವಾಜಿ, ಸಾವರ್ಕರ್, ತೈಮೂರ್, ಘಸ್ನಿ ಮಹ್ಮದ್, ಟಿಪ್ಪುವಿನ ಹೆಸರಿನಲ್ಲಿ ಇತಿಹಾಸವನ್ನು ಅವರ ಮನಬಂದಂತೆ ತಿರುಚಿಕೊಂಡು ವಾಟ್ಸಾಪ್ ನಲ್ಲಿ ಫಾರ್ವರ್ಡ್‌ ಮಾಡಿಕೊಂಡಿರಲಿ. ಹಿಂದೂ, ಮುಸ್ಲೀಮ್, ಕ್ರಿಶ್ಚಿಯನ್, ಮೇಲುಜಾತಿ ಕೀಳುಜಾತಿ ಎಂದು ಕಿತ್ತಾಡಿಕೊಂಡಿರಲಿ. ರಾಮ, ಕೃಷ್ಣ, ಗಂಗೆ, ಕಾವೇರಿ ಎಂದು‌ ತಮ್ಮ ಖಿನ್ನತೆಯ, ಹತಾಶೆಯ ಕಾವು ಏರಿಸಿಕೊಳ್ಳುತ್ತಿರಲಿ. ಎಲ್ಲರ ಕುತ್ತಿಗೆಗಳಿಗೆ ಹಗ್ಗವೊಂದು ತಣ್ಣಗೆ ಸುತ್ತಿಕೊಂಡು, ಕುಣಿಕೆ ಹಾಕಿಕೊಳ್ಳುತ್ತಿರುವುದು ಯಾರಿಗೂ ತಿಳಿಯುತ್ತಿಲ್ಲ.‌ ಅದು ಮೇಲಕ್ಕೆ ಜೀಕಿದಾಗ ಉಸಿರಾಟ ನಿಂತು ಮತಿಭ್ರಮಣೆಯಾಗಿರುವ ಮೆದುಳುಗಳು ನಿಷ್ಕ್ರಿಯವಾಗುತ್ತವೆ.

Comments