ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತ ರಾಹುಲ್ ಗಾಂಧಿ "ಒಂದು ಕಡೆ ಕ್ರೋನಿ ಕ್ಯಾಪಿಟಲಿಸ್ಟ್ಗಳ ತೋಳ್ಬಲ ಮತ್ತೊಂದು ಕಡೆ ಬಡಜನರ ಶಕ್ತಿ ಇತ್ತು. ಕೊನೆಯಲ್ಲಿ ಜನಶಕ್ತಿಯು ಪ್ರಭುತ್ವದ ತೋಳ್ಬಲವನ್ನು ಸೋಲಿಸಿತು" ಎನ್ನುತ್ತಾ ಅದಕ್ಕೆ ಒಂದು ಮಾತು ಸೇರಿಸಿದರು. ಅದೇನೆಂದರೆ, "ನನಗೆ ಬಹಳ ಖುಷಿಯ ಸಂಗತಿ ಏನೆಂದರೆ ನಾವು ದ್ವೇಷವನ್ನು ಬಳಸಿ, ಅಸಹ್ಯ ಮಾತುಗಳನ್ನಾಡಿ ಈ ಚುನಾವಣೆ ಗೆಲ್ಲಲಿಲ್ಲ. ನಾವು ಹೃದಯ ತೆರೆದು ಪ್ರೀತಿಯಿಂದ ಈ ಚುನಾವಣೆಯನ್ನು ಸ್ಪರ್ದಿಸಿದೆವು. ಮತ್ತು ಈ ದೇಶಕ್ಕೆ ಪ್ರೀತಿ ಇಷ್ಟವಾಗುತ್ತದೆ ಎಂದು ಕರ್ನಾಟಕದ ಜನರು ಸಾಬೀತುಪಡಿಸಿದರು."
ರಾಹುಲ್ ಗಾಂಧಿ (ರಾಜಕೀಯದಲ್ಲಿ) ಪ್ರೀತಿಯ ಪ್ರಾಮುಖ್ಯತೆಯನ್ನು ತೋರಿಸುವಂತ ಮಾತುಗಳನ್ನು ಆಡಿದ್ದು ಇದೆ ಮೊದಲಲ್ಲ. ಭಾರತ್ ಜೋಡೋ ಯಾತ್ರಾ ಸಂದರ್ಭದಲ್ಲಿ "ದ್ವೇಷದ ಸಂತೆಯಲ್ಲಿ ನಾನು ಪ್ರೀತಿಯ ಅಂಗಡಿ ಹಾಕಿ ಕೂರುತ್ತೇನೆ" ಎಂದು ಹೇಳಿದ್ದರು. ಈಗ ಮತ್ತೆ ಅದೇ ಅರ್ಥದ ಮಾತನ್ನು ಆಡಿದ್ದಾರೆ. ನನ್ನ ಮಾತು ಕೆಲವರಿಗೆ ಅಪ್ರಿಯ ಅಥವಾ ಪ್ರಿ-ಮೆಚ್ಯುರ್ಡ್ ಅಂತ ಅನ್ನಿಸಿದರೂ ಪರವಾಗಿಲ್ಲ, ಅದು ಸತ್ಯ ಆಗಿದ್ದರೂ ಪರವಾಗಿಲ್ಲ, ಆದರೆ ಸದ್ಯಕ್ಕೆ ನನಗನ್ನಿಸುವುದು ಏನೆಂದರೆ ಪ್ರೀತಿ ರಾಹುಲ್ ಗಾಂಧಿಯವರ ರಾಜಕೀಯ ಮಾರ್ಗ. ಈ ಪ್ರೀತಿ ಸುಮ್ಮನೆ ಸಜ್ಜನಿಕೆಯ ಲಕ್ಷಣವಾಗಿ ಮೊದಮೊದಲಿಗೆ ಕಂಡಿದ್ದರೂ (ಅದು ಹಾಗೆ ಇದ್ದಿದ್ದರೂ ಇರಬಹುದು), ಈಗ ಆ ಪ್ರೀತಿ ಒಂದು ಶಕ್ತಿಯಾಗಿ ಮಾರ್ಪಟ್ಟಿದೆ ಅಂತ ಅನ್ನಿಸುತ್ತಿದೆ. ಅದು ರಾಹುಲ್ ಗಾಂಧಿ ಅವರ ಮಾತು, ಅವರ ನಡಿಗೆ, ಅವರ ಚಲನವಲನದ ಕಾಣಿಸಲು ಆರಂಭಿಸಿದೆ.
ಈಗ ದ್ವೇಷ ರಾಜಕಾರಣ ಸೋತಿದೆ, ಇಲ್ಲಿ ಜನರೊಳಗೆ ಪ್ರೀತಿ ಉದಯಿಸಲಾರಂಭಿಸಿದೆ ತರಹದ ತೆಳುವಾದ ಮಾತುಗಳಲ್ಲಿ ನನಗೆ ನಂಬಿಕೆ ಇಲ್ಲ. ಆದರೆ ಪ್ರೀತಿಯ ಮಾತುಗಳಲ್ಲಿ, ಮತ್ತು ಪ್ರೀತಿ ರಾಜಕೀಯ ಮಾರ್ಗ ಆಗುವ, ರಾಜೇಕೀಯಕ್ಕೆ ಪ್ರೀತಿಯ ಗುರುತ್ವಾಕರ್ಷಣೆ ಇರುವುದು ತೀರಾ ಅಗತ್ಯ ಎಂದು ನಂಬಿದ್ದೇನೆ. ಇದು ತುರ್ತು ಸಹ ಹೌದು. ತುಸು ಆದರ್ಶವಾದಿ ಅನ್ನಿಸಿದರೂ, ಕೊನೆಗೆ ಈ ಮಾರ್ಗ ಗೆಲ್ಲುತ್ತದೆ ಮತ್ತು ಆ ಗೆಲುವು ಎಲ್ಲರ ಗೆಲುವು ಆಗಲಿದೆ ಎಂಬ ನಂಬಿಕೆ ನನ್ನದು. ಹಾಗಾಗಿ ಈ ಮಾರ್ಗ ಯಾರು ಆಯ್ದುಕೊಂಡರೂ, ಯಾರೇ ಪ್ರೀತಿಯನ್ನು ಮುನ್ನಲೆಯಲ್ಲಿಟ್ಟುಕೊಂಡು ರಾಜಕೀಯ ನಡೆಸಿದರೂ,ಪ್ರೀತಿ ಯಾರ ಲೋಕದೃಷ್ಟಿಯನ್ನು ರೂಪಿಸಿದೆಯೋ, ನಾನವರ ಸಂಗಾತಿ.
ರಾಹುಲ್ ಗಾಂಧಿ ಒಮ್ಮೆ ಪಾರ್ಲಿಮೆಂಟ್ ಅಲ್ಲಿ "ನಾನು ಬಿಜೆಪಿ ಅವರ ಒಳಗಿನ ಪ್ರೀತಿಯನ್ನು ಜಾಗೃತಗೊಳಿಸುತ್ತೇನೆ" ಅಂತಂದಿದ್ದರು. ಎದುರಾಳಿಯ ಹುಟ್ಟಡಗಿಸುವ, ಅವರನ್ನು ಮೆಟ್ಟುವ ಮಾತುಗಳು ಸಾಮಾನ್ಯವಾಗಿರುವ ಲೋಕದಲ್ಲಿ, ತನ್ನ ಎದುರಾಳಿ, ಅದರಲ್ಲೂ ಅದು ಈ ವಿಷಕಾರಿ ಜೀವ ವಿರೋಧಿ ಕೋಮುವಾದಿಗಳು ಆಗಿರುವಾಗ, ಅವರನ್ನು ಬಗ್ಗುಬಡಿಯ ಮಾತಾಡದೆ ಅವರ ಒಳಗಿನ ಮನುಷ್ಯತ್ವ ವನ್ನು ಎಬ್ಬಿಸುವ ಮಾತಾಡಿದಾಗ, ಅವರು ಬಹಳ ಎತ್ತರದ ಮನುಷ್ಯರಾಗಿ ಕಂಡರು.
ದ್ವೇಷದ ಮುಂದೆ ಪ್ರೀತಿಯ ಶಕ್ತಿ ಎಂತದ್ದು ಎಂದು ಕಾಣಲು, ರಾಹುಲ್ ಗಾಂಧಿ ಅಂದು ಪಾರ್ಲಿಮೆಂಟ್ ಅಲ್ಲಿ ಆ ಮಾತುಗಳನ್ನಾಡಿದ ಮೇಲೆ ಹೋಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡ ದೃಶ್ಯ ನೋಡಬೇಕು... ರಾಹುಲ್ ಗಾಂಧಿ ಅಂದು "ನೀವು ನನ್ನನ್ನು ದ್ವೇಷಿಸುತ್ತೀರಿ. ನಿಮ್ಮ ದೃಷ್ಟಿಯಲ್ಲಿ ನಾನು ಪಪ್ಪು," ಎನ್ನುವಾಗ ಬಿದ್ದುಬಿದ್ದು ನಗುತ್ತಿದ್ದ ಪ್ರಧಾನ ಮಂತ್ರಿ ಅವರು ರಾಹುಲ್ ಗಾಂಧಿ "ಆದರೆ ನನಗೆ ನಿಮ್ಮ ಮೇಲೆ ಎಳ್ಳಷ್ಟೂ ದ್ವೇಷ ಇಲ್ಲ" ಎನ್ನುವಾಗಲೂ ತಮ್ಮ ನಗುವನ್ನು ಮುಂದಿವರೆಸಿ ಆ ಮಾತು ಒಂದು ಜೋಕ್ ಎಂಬಂತೆ ವರ್ತಿಸಿದರು. ಆದರೆ ಮಾತು ಮುಗಿಸಿದ ರಾಹುಲ್ ಗಾಂಧಿ ಎದ್ದು ಪ್ರಧಾನಮಂತ್ರಿಯ ಬಳಿ ಹೋದಾಗ ಪ್ರಧಾನಮಂತ್ರಿಯ ನಗುವೆಲ್ಲ ಮಾಯವಾಯಿತು. ರಾಹುಲ್ ಗಾಂಧಿ ಅವರನ್ನು ಎದ್ದೇಳಲು ಸಂಜ್ಞೆ ಮಾಡಿದಾಗ ಆತ ತನಗೆ ಹೊಡೆಯಲು ಬಂದನೇನೋ ಎಂಬಂತೆ ಕೋಪದಲ್ಲಿ ಕೈಯಲ್ಲೇ "ಏನು?" ಎಂದು ಪ್ರಶ್ನಿಸುತ್ತಾರೆ. ಆದರೆ ಅವರ ನಿರೀಕ್ಷೆಗೆ ವಿರುದ್ಧವಾಗಿ ರಾಹುಲ್ ಗಾಂಧಿ ಕುಳಿತೇ ಇದ್ದ ಪ್ರಧಾನ ಮಂತ್ರಿಯನ್ನು ಅಪ್ಪಿಕೊಂಡರು. ಅವರು ಹಾಗೆ ಅಪ್ಪಿಕೊಂಡಾಗ ನರೇಂದ್ರ ಮೋದಿ ಸ್ಥಬ್ದರಾಗಿ ಹೋದರು. ಗಾಬರಿಗೊಂಡಂತೆ ಅವರ ಇಡೀ ಜೀವ ಸೆಟೆಯಿತು. ರಾಹುಲ್ ಗಾಂಧಿಯ ಪ್ರೀತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ ಹೋಯಿತು ನರೇಂದ್ರ ಮೋದಿಗೆ. ಅವರು ಆ ಅಪ್ಪುಗೆಯ 'ಶಾಕ್' ಇಂದ ಸಂಭಾಳಿಸಿಕೊಂಡು ಹಾಗೆ ಅಪ್ಪಿಕೊಂಡ ಮೇಲೆ ತನ್ನ ಜಾಗದ ಕಡೆಗೆ ಮರಳುತ್ತಿದ್ದ ರಾಹುಲ್ ಗಾಂಧಿ ಅನ್ನು ಕರೆದು ಬೆನ್ನು ತಟ್ಟುತ್ತಾರೆ. ತಾನು ಬೆನ್ನು ತಟ್ಟುತಿರುವುದೇ ಔದಾರ್ಯ ಎಂಬಂತೆ ಬೀಗುತ್ತಾರೆ.
ಅಂದು ರಾಹುಲ್ ಗಾಂಧಿ ಹೇಳಿದ ಮಾತು ಮಾತ್ರವಲ್ಲ, ಅವರು ನೀಡಿದ ಅಪ್ಪುಗೆ ಮಾತ್ರವಲ್ಲ, ತನ್ನ ಜಾಗದಿಂದ ಎದ್ದು ಮೋದಿಯ ತನಕ ನಡೆದುಕೊಂಡು ಹೋದದ್ದು, ಅವರು ಎದ್ದು ನಿಲ್ಲದಾಗ ತಾನೇ ಬಾಗಿ ಅವರನ್ನು ಅಪ್ಪಿಕೊಂಡದ್ದು, ತನ್ನ ಸ್ಥಾನಕ್ಕೆ ಮರುಳ್ವ ಸಂದರ್ಭ ಮೋದಿ ತನ್ನನ್ನು ಕರೆದಾಗ ಹಿಂದಿರುಗಿದ್ದು, ಅವರ ಬೆನ್ನು ತಟ್ಟಿದಾಗ ತಟ್ಟಿಸಿಕೊಂಡಿದ್ದು... ಎಲ್ಲವೂ ಹೇಳುವುದು ಏನೆಂದರೆ ಪ್ರೀತಿಗೆ ನುಡಿಯಲು, ನಡೆಯಲು, ದಾಟಲು, ಬಾಗಲು, ಅಪ್ಪಿಕೊಳ್ಳಲು, ನಿಲ್ಲಲು, ಸಾಧ್ಯ, ಮತ್ತು ಅಷ್ಟೇ ಅಲ್ಲ, ತೋರಿಕೆಯ ಮೆಚ್ಚುಗೆಯನ್ನು ಸಹ ಗೌರವಯುತವಾಗಿ ಸ್ವೀಕರಿಸಲು ಸಾಧ್ಯ ಎಂದು. ಇನ್ನೊಬ್ಬರ ಮಾತಿನ ಗಂಭೀರತೆಯನ್ನು ತಿಳಿಯಾಗಿಸಲು ಸುಳ್ಳು ನಗುವನು ನಗುವ, ಹತ್ತಿರ ಬಂದವರನ್ನು ಸಂಶಯದಿಂದ ನೋಡುವ, ಕುಳಿತಲ್ಲಿಂದ ಎದ್ದೇಳಲಾಗದ, ತಬ್ಬಿಕೊಂಡಾಗ ಸ್ಥಬ್ದವಾಗುವ, ಸೆಟೆಯುವ, ಅಪ್ಪುಗೆಯಂಥ ಸಮಾನ ಪ್ರೀತಿಯ ಸನ್ನೆಗೆ ಪ್ರತಿಯಾಗಿ ಬೆನ್ನುತಟ್ಟುವ ಅಸಮಾನ ಸನ್ನೆ ತೋರಿಸುವ, ಮತ್ತು ತನ್ನ ನಡೆಗೆ ನಾನೇ ಬೀಗುವುದು- ನರೇಂದ್ರ ಮೋದಿ ಅವರ ರಾಜಕೀಯ ಮಾರ್ಗದ ನಿಶ್ಚಲತೆ, ಹಠಮಾರಿತನ, ಮತ್ತು ಪ್ರೇಮರಾಹಿತ್ಯತೆಯನ್ನು ಆ ಸಂದರ್ಭ ತೋರಿಸಿತು.
ಪ್ರಧಾನ ಮಂತ್ರಿ ೨೦೧೬ರಲ್ಲಿ ನೋಟುಗಳ ಅಮಾನ್ಯ ಮಾಡಿದ ನಂತರದ ದಿನಗಳಲ್ಲಿ "ಮಿತ್ರೋ" ಎಂಬ ಅವರ ಸಿಗ್ನೇಚರ್ ತುಂಬಾ ಅಪಹಾಸ್ಯಕ್ಕೆ ಒಳಗಾಯಿತು. ನವೆಂಬರ್ ೮ರ ನಂತರ ಅವರು ಐವತ್ತು ದಿನ ಬಿಟ್ಟು ಮಾಡಿದ ಇನ್ನೊಂದು ಭಾಷಾದಲ್ಲಿ ಅವರು ಒಂದೇ ಒಂದು ಬಾರಿಯೂ "ಮಿತ್ರೋ" ಎಂದು ಹೇಳಲಿಲ್ಲ. ಇದನ್ನು ಗಮನಿಸಿ ಯಾರೋ ಒಬ್ಬರು "ಮೋದಿ, ಹಾಸ್ಯಕ್ಕೆ, ವಿಡಂಬನೆಗೆ ಹೆದರುತ್ತಾರೆ," ಎಂಬ ಅರ್ಥದ ಲೇಖನ ಬರೆದಿದ್ದರು, ಮೋದಿ ಅವರ ಮಾತನ್ನೇ ಪರೀಕ್ಷೆಗೆ ಒಡ್ಡಿ. (ಅವರ ಹೆಸರು ನೆನಪಿಗೆ ಬರುತ್ತಿಲ್ಲ ಎಂಬುದು ದುರಂತ. ಆ ಲೇಖನ ಸ್ಕ್ರಾಲ್ ಅಲ್ಲಿ ಪ್ರಕಟ ಆಗಿತ್ತು ಎಂದು ಅನಿಸುತ್ತದೆ). ಇದ್ದರೂ ಇರಬಹುದು. ಯಾಕೆಂದರೆ, ತನ್ನನ್ನು ಬಾಧಿಸುವ ಸಂಗತಿಯನ್ನೇ - ಅಂದರೆ ಹಾಸ್ಯ- ಬಳಸಿಯೇ ಅವರು ರಾಹುಲ್ ಗಾಂಧಿ ರಾಜಕೀಯ ಜೀವನವನ್ನು ಸಂಹರಿಸಲು ನೋಡಿದ್ದು! ಆದರೆ ಅದೇ ರಾಹುಲ್ ಗಾಂಧಿ ಹಾಸ್ಯದ ವಿಡಂಬನೆಯ ಮಾರ್ಗ ಅನುಸರಿಸಿದ್ದರೆ ಬಹುಶಃ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಏಟು ತಿರುಗೇಟು ನಡೆಯುತ್ತಿತ್ತು, ಯಾಕೆಂದರೆ ರುಚಿಗೆಟ್ಟ ಮಾತನಾಡುವುದು, ಕುಹಕವಾಡುವುದು ಎಲ್ಲಾ ನರೇಂದ್ರ ಮೋದಿ ಅವರಿಗೆ ಮಕ್ಕಳಾಟ. ಆದರೆ ರಾಹುಲ್ ಗಾಂಧಿ ಪ್ರೀತಿಯ ಮಾತನಾಡಿದಾಗ, ಪ್ರೀತಿಯ ಅಪ್ಪುಗೆ ನೀಡಿದಾಗ ಮಾತ್ರ ನರೇಂದ್ರ ಮೋದಿ ನಿಶಾಸ್ತ್ರರಾಗಿಬಿಟ್ಟರು. ಈ ಬಾರಿಯ ಕರ್ನಾಟಕ ಚುನಾವಣಾ ಪ್ರಚಾರದಲ್ಲಿಯೂ ಅವರಿಗೆ "ನನಗೆ ೯೨ ಬಾರಿ ಅವಹೇಳನ ಮಾಡಿದರು" ಎನ್ನುವಾಗ, ಜನರಿಂದ ಪ್ರತಿಕಾರ ಬಯಸಿದರೆ ಹೊರತು, ರಾಹುಲ್ ಗಾಂಧಿಯ ರೀತಿ "ಆದರೆ ನನಗೆ ಅವರ ಮೇಲೆ ಪ್ರೀತಿ ಇದೆ" ಎನ್ನುವ ಮಾತು ಹೇಳಲಾಗದೆ ಹೋದರು. ಪ್ರೀತಿಗೆ ಪ್ರತಿಯಾಗಿ ಸಹ ಅವರ ಬಳಿ ದ್ವೇಷವೇ ಇತ್ತು. ಇಂಥಾ ಹೃದಯಶೂನ್ಯ ವ್ಯಕ್ತಿಯೊಳಗಿಂದ ರಾಹುಲ್ ಗಾಂಧಿಗೆ ಪ್ರೀತಿ ಜಾಗೃತಗೊಳಿಸಲು ಸಾಧ್ಯವೋ ಇಲ್ಲವೋ, ಗೊತ್ತಿಲ್ಲ, ಆದರೆ ನನ್ನ ದೇಶಕ್ಕೆ ಪ್ರೀತಿಯ ಮಾರ್ಗ ಬೇಕೇ ಹೊರತು, ದ್ವೇಷದ ಅಮಲು ಅಲ್ಲ.
Comments
Post a Comment